Kannada · Fiction

ಗುಡಿಗೆ ನಿಮ್ಮ ಬಂದೆನು....

Writer DP! Preetham Pais 06 Mar 18 32 Views
ಗುಡಿಗೆ ನಿಮ್ಮ ಬಂದೆನು , ಹೃದಯವೆನ್ನ ತಂದೆನು....... 
ಬೆಳ್ಳಂಬೆಳಗ್ಗೆ ಚರ್ಚ್ ಹೊಕ್ಕು ಬಂದಿದ್ದ ಜೆರಾಲ್ಡ್ ನ ಬಾಯಲ್ಲಿ ಇದೇ ಕೀರ್ತನೆ ಗುನುಗುತಿತ್ತು. ಜೆರಾಲ್ಡ್ ಶಿವಮೊಗ್ಗದ, ತೀರ್ಥಹಳ್ಳಿ ಬಳಿಯ ಮೇಗರವಳ್ಳಿ ಗ್ರಾಮದ ತುಂಗಾ ನದಿ ಹರಿವಿಗೆ ಮುಖಮಾಡಿರುವ ಕುಕ್ಕನಂಜೇ ಗ್ರಾಮದವನು . ಸರ್ವ ಸಮಸ್ತ ಕರಾವಳಿ ಕ್ರೈಸ್ತರಂತೆ ತಾನೂ ದುಬೈಯಲ್ಲಿ ಹೊಸದಾಗಿ ಕೆಲಸ ಹುಡುಕಿಕೊಂಡವ. ವಯಸ್ಸಾದ ಅಜ್ಜಿ, ಸ್ವರ್ಗಸ್ಥ ಅಜ್ಜ ಹಾಗು ತಂದೆ, ಭಕ್ತೆ ತಾಯಿ, ತನ್ನ ಅಣ್ಣನಿಂದ ಮೊಬೈಲ್ ಫೋನ್ ನಿರೀಕ್ಷೆಯಲ್ಲಿರುವ ತಂಗಿ ಹಾಗೂ ಈ ಪುಟ್ಟ ಸಂಸಾರವನ್ನ ಶಿಥಿಲ ಸೂರಿನಿಂದ ಕಾಪಾಡುತ್ತಿರುವ ಮನೆ, ಇವಿಷ್ಟು ಜೆರಾಲ್ಡ್ನ ಆಸ್ತಿ ಮತ್ತು ಪಾಸ್ತಿ.


"ಈವತ್ತು ಚರ್ಚ್ ಲಿ ಫಾದರ್ ಹೇಳಿದ್ದು ಕೇಳಿಸಿಕೊಂಡಿಯ ಜೆರಾಲ್ಡ್" ತಾಯಿ ಕೇಳಿದಳು.
"ಹಾಂ, ಅದೇ ಹಳೆಯ ಕಥೆ ಬಿಡು, ಕೇಳಿಸಿಕೊಂಡೆ" ಉದಾಸೀನದಿಂದೆಂಬಂತೆ ಜೆರಾಲ್ಡ್ ಮರುನುಡಿದ.
" ಚರ್ಚ್ ಗೆ ಹೊಸ ಮಾಡು ಕಟ್ಟಬೇಕಂತಲ್ಲ, ಮನೆಯಿಂದ ಕನಿಷ್ಠ ೧೦೦೦ ಕೊಡಬೇಕಂತ ಹೇಳಿದ್ದು ಕೇಳಿಸಲಿಲ್ವ"
"ಹಾಂ, ಅದನ್ನು ಕೇಳಿಸಿಕೊಂಡೆ , ಕೊಡೋಣ ಏನಾದರೂ, ನಾನು ಇನ್ನು 10 ದಿನ ಇರ್ತೇನೆ ಊರಲ್ಲಿ"

" ಅದೇ ಎಷ್ಟು ಕೊಡೋಣ ಅಂತ , ನೀನು ಬೇರೆ Dubai ಲಿ ಇದ್ದೀಯ ಅಂದಮೇಲೆ ಕಡಿಮೆ ಕೊಡೋಕು ಆಗೋದಿಲ್ಲ"

"ನಮ್ಮ ಮನೆಯದ್ದೇ ಹೆಂಚು ಹಾರಿ ಹೋಗೋ ರೀತಿ ಇದೆ, ಮಳೆ ಶುರುವಾಗ್ತದೆ ಇನ್ನು ಸ್ವಲ್ಪ ಕಾಲಕ್ಕೆ , ಅದಕ್ಕೆ ಹಣ ಹೊಂದಿಸೋಕೆ ಕಷ್ಟ ಪಡ್ತಾ ಇದ್ದೀನಿ ನಾನು"

"ಅದನ್ನು ಮಾಡಿಸೋಣ ಬಿಡು , ಹಳೆಯ ಹೆಂಚು ಉಪಯೋಗಕ್ಕೆ ಬರತ್ತವೆ, ಹೊಸದೇನು ೧೦೦ -೨೦೦ ಹೆಂಚು ಸಾಕು"

"ಅದಕ್ಕೂ ಹಣ ಬೇಕಲ್ವಾ? ನಾನು -ನೀನು ಸೇರಿ ಹಾಕೋದ? ಕೂಲಿ ಕೊಡಬೇಡ್ವ?"

"ಇಷ್ಟು ವರ್ಷ ಬಾಳಿಕೆ ಬಂದಿಲ್ವ? ಇನ್ನು ೨ -೩ ವರ್ಷ ಖಂಡಿತ ನಡೀತದೆ, ಇನ್ನೆರಡು ವಾರದಲ್ಲಿ ಚರ್ಚ್ ಗೆ ಹಣ ಕೊಡಬೇಕಂತಲ್ಲ, ದೇವರ ಕೆಲಸ ಮೊದಲು ಮುಗಿಸಿಬಿಡು"

"ಸರಿ, ೫೦೦೦ ಕೊಡೋಣ , ೨ ವಾರ ಬಿಟ್ಟು ನೋಡುವ, ನಂಗೆ ದುಬೈ ಲಿ ಸಹ ಖರ್ಚಿದೆ"

"ಕ್ಲಾರಾ ಅವ್ರು ೧೦೦೦೦ ಕೊಡ್ತಾರೆ ಹೇಳಿದ್ರು , ಇನ್ನು ಆ ಮಲಯಾಳಿ ಕುವೈಟ್ ಜೋಸೆಫ್ ಅವ್ರು ೫೦೦೦೦ ಅಂತೇ"

ಏನೂ ಮಾತಾಡದೆ ಜೆರಾಲ್ಡ್ ಸುಮ್ಮನಾದ. ತಾಯಿಯೇ ಮುಂದುವರೆಸುತ್ತ.
"ಇಷ್ಟೇ ಕೊಡಬೇಕು ಅಂತ ಫಾದರ್ ಹೇಳಿಲ್ಲವಲ್ಲ, ೧೦೦೦೦ ಕೊಟ್ಟವರ ಹೆಸರು ಚರ್ಚ್ ಮುಂದೆ ಹಾಕ್ತಾರೆ ಅಂತ ಎಲ್ಲರೂ ಅಷ್ಟಾದರೂ ಕೊಡೊ ಪ್ರಯತ್ನ ಮಾಡ್ತಾರೆ, ಒಂದು ಲಕ್ಷ ಕೊಟ್ಟವರಿಗೆ ಸನ್ಮಾನ ಇದೆ ಅಂತಲ್ಲ, ನಮಗೆ ಅಷ್ಟು ಸಧ್ಯ ಇಲ್ಲ ಬಿಡು , ಐವತ್ತು ಸಾವಿರಕ್ಕೆ ಸನ್ಮಾನ ಮಾಡೋಕೆ ಆಗಿದ್ರೆ ಒಳ್ಳೆದಿತ್ತು, ಏನೋ ನೋಡಪ್ಪ ದುಡಿವವ ನೀನು" ಸ್ವಗತದಿಂದೆಂಬಂತೆ ತಾಯಿ ಎಲ್ಲವನ್ನ ಹೇಳಿ ಮುಗಿಸಿದಳು.
" ಸರಿ, ಐವತ್ತು ಸಾವಿರಕ್ಕೆ ಚೆಕ್ಕು ಬರೆದು ಕೊಡ್ತೇನೆ ಹೋಗುವಾಗ, ಮುಂದಿನ ವರ್ಷಕ್ಕೆ ಬಂದಾಗ , ನಮ್ಮ ಮನೆ ಹೆಂಚನ್ನಾದರೂ ಸರಿ ಮಾಡೋಣ"

"ಆಗಲಿ, ಹಾಗೆ ಆಗಲಿ, ದೇವರು ಖಂಡಿತ ಇದಕ್ಕಿಂತ ಹೆಚ್ಚು ಕೊಡ್ತಾನೆ ನಿನಗೆ" ತಾಯಿಯ ಸಂತೋಷಕ್ಕೆ, ಜೆರಾಲ್ಡ್ ಸಹ ಸಮ್ಮತಿಸಿ ಸುಮ್ಮನಾದ.


                                                                                +++++++++++++


"ನಾನು ನಾಳೆ ಬೆಳಗ್ಗೆ ಗೆ ಬರ್ತೇನೆ ಅಮ್ಮ, ಭಯ ಪಡಬೇಡ, ಥಾಮಸ್ ಗೆ ಫೋನ್ ಮಾಡಿದ್ದೇನೆ, ಅವನೆಲ್ಲ ನೋಡಿಕೊಳ್ತಾನೆ ಆಯ್ತಾ" 
"ಜೆರಾಲ್ಡ್ ನನಗಂತೂ ಏನು ಮಾಡೋಕು ಕೈ-ಕಾಲು ಆಡ್ತಾ ಇಲ್ಲ, ಆದಷ್ಟು ಬೇಗ ಬಾ" 
ಮರುದಿನವೇ ಜೆರಾಲ್ಡ್ ಮನೆಯ ಮುಂದಿದ್ದ, ಮಲೆನಾಡ ಮಳೆ ತನಗೆ ಹೊಸತೇನು ಅಲ್ಲದಿದ್ದರೂ, ಇಂದೇಕೋ ಇದು ಸಹಿಸಲಸಾದ್ಯವಾಗಿತ್ತು.
ಇವ ಬರುವ ಸೂಚನೆ ಅರಿತ ನೆರೆ-ಹೊರೆಯವರು ನೆರೆಯನ್ನ ಲೆಕ್ಕಿಸದೆ ಇವನ ಮನೆ ಮುಂದೆ ನಿಂತಿದ್ದರು.
"ಮನೆಯ ಮಾಡು ಕಳಚಿ ಬಿತ್ತಪ್ಪಾ, ಸಧ್ಯ ಎಲ್ಲರೂ ಒಳ ಕೊನೆಯಲ್ಲಿ ಮಲಗಿದ್ದರು, ತಲೆಯ ಮೇಲೆ ಬಿದ್ದಿದರೆ ಏನು ಗತಿ ಅಂತೀನಿ"
"ನನಗೋ ಏನೋ ಬಾಂಬ್ ಬಿದ್ದ ಸದ್ದು ಕೇಳಿದಂತಾಗಿ, ಹೊರ ಒಡ್ಡಿ ಬಂದೆ" ಜೀವನದಲ್ಲಿ ಬಾಂಬ್ ನ ಸದ್ದು ಕೇಳದ ಆಚೆ ಮನೆಯವನೆಂದ.
"ಹೌದೋ ಜೆರಾಲ್ಡ್, ಇವರೆಲ್ಲ ಇದ್ದದಕ್ಕೆ ಆಯಿತು, ಎಲ್ಲಾ ನೀರಲ್ಲಿ ತೋಯ್ದು ಹೋಗಿದೆ, ಸಾಧ್ಯವಾದದ್ದೆಲ್ಲ ಹೆಕ್ಕಿ ಥಾಮಸ್ ಮನೆಯಲ್ಲಿ ರಾಶಿ ಹಾಕಿದ್ದೇವೆ, ದೇವರು ದೊಡ್ಡವನು ಯಾರಿಗೂ ಏನು ಆಗಿಲ್ಲ" ಕಂಗಾಲಾಗಿದ್ದ ತಾಯಿ ಮಗನನ್ನ ಬಿಗಿದಪ್ಪಿ ಹೇಳಿದಳು. 
"ಸರಿ, ಆದದ್ದು ಆಯಿತು, ಸಂಜೆ ಮೇಲೆ ಮಳೆ ಕಡಿಮೆ ಆದರೆ ಮುಂದೇನು ಮಾಡುದು ನೋಡುವ" ವಿಚಲಿತನಾಗದೆ ಜೆರಾಲ್ಡ್ ಹೇಳಿದ.
"ಸಂಜೆ, ಫಾದರ್ ಮಳೆಯಿಂದ ಹಾನಿಯಾದವರಿಗಾಗಿ ಪ್ರಾರ್ಥಿಸಲು ವಿಶೇಷ ಪೂಜೆ ಇಟ್ಟುಕೊಂಡಿದ್ದಾರೆ, ಬನ್ನಿ ಎಲ್ಲರೂ, ಸಂಜೆ ಅಲ್ಲಿಯೇ ಸಿಗೋಣ" ವಿಶೇಷ ಆಹ್ವಾನ ಸಿಕ್ಕಂತೆ ಎಲ್ಲರೂ ಹ್ಞೂಕರಿಸುತ್ತ ತಮ್ಮ -ತಮ್ಮ ಮನೆ ಸೇರಿಕೊಂಡರು.


                                                                               ##############


ಸಂಜೆ ವಿಶೇಷ ಪೂಜೆಯಲ್ಲಿ ಫಾದರ್ ಪರಾತ್ಪರನಾನ್ನ ಸ್ಮರಿಸುತ್ತ, " ಕ್ರಿಸ್ತನ ಮಹಿಮೆಯಿಂದ ನಮ್ಮ ಊರಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಇದಕ್ಕಾಗಿ ನಾವು ದೇವರಿಗೆ ಧನ್ಯವಾದ ಅರ್ಪಿಸಬೇಕು. ಹಲವರ ತೋಟ-ಗದ್ದೆ ಈ ವಿನಾಶಕಾರಿ ಮಳೆಯಿಂದ ಹಾನಿಯಾಗಿದೆ. ಈ ನಷ್ಟವನ್ನ ಭರಿಸುವ ಶಕ್ತಿಯನ್ನ ಸರ್ವಶಕ್ತ ದೇವರು ಅವರೆಲ್ಲರಿಗೆ ಕರುಣಿಸಲಿ. ಈ ಸಂಕಷ್ಟದ ಸಮಯದಲ್ಲಿ ನಮ್ಮ ಅಣ್ಣ -ತಮ್ಮಂದಿರೊಂದಿಗ್ಗೆ ನಾವು ನಿಲ್ಲಬೇಕಿದೆ, ಆದ್ದರಿಂದ ನಮ್ಮಿಂದ ಕೈಲಾದಷ್ಟು ಸಹಾಯವನ್ನ ನಾವು ಮಾಡಬೇಕಾದ್ದು ಕರ್ತವ್ಯ, ನಿಮ್ಮೆಲ್ಲರ ತಾನು-ಮನ-ಧನ ಸಹಾಯದಿಂದ ನಾವು ಈ ಕಾರ್ಯ ನೆರವೇರಿಸೋಣ. ಯಾರಲ್ಲೂ ನನ್ನ ವೊತ್ತಾಯವಿಲ್ಲ, ನಿಮ್ಮ ಕೈಲಾದುದನ್ನ ಮುಂದಿನ ಭಾನುವಾರ ಪೂಜೆಯಲ್ಲಿ ಅರ್ಪಿಸಬೇಕಾಗಿ ನನ್ನ ಕಳಕಳಿಯ ಮನವಿ".


ಪೂಜೆಯ ಅಂತ್ಯಕ್ಕೆ ಜೆರಾಲ್ಡ್ ನ ತಲೆಯಲ್ಲಿ ಮತ್ತದೇ ಗುನುಗು "ಗುಡಿಗೆ ನಿಮ್ಮ ಬಂದೆನು ... ಹೃದಯವೆನ್ನ ತಂದೆನು......."


1
Reading under T&C