Kannada · Fiction

ಸರ್ಕಾರಿ ಸೇಂಕಲ್

Writer DP! Preetham Pais 25 Jul 17 19 Views
                                                                                                ೧ 
"ಮಂಜೆ ಏಕ್ ಸೈಕಲ್ ದಿಲಾ ಅಬ್ಬಾ" ಏಳನೇ ತರಗತಿಯನ್ನ ಹೇಗೋ ಏಗಿ ಪಾಸು ಮಾಡಿದ್ದ ಮೊಹೀಬ್ ತನ್ನ ತಂದೆಯನ್ನ ಕೇಳಿದ.
"ತುಂಮ್ನ ಕಾಯಿಕುರೆ ಸೇಂಕಲ್?" ತಾನು ಇವನ್ನನ್ನ ಓದಿಸುತ್ತಿರುವುದೇ ದೊಡ್ಡ ಅನ್ಯಾಯವೆಂದು ನಂಬಿದ್ದ ಅನ್ವರ್ ಖಾನ್ ಮರುಪ್ರಶ್ನೆ ಹಾಕಿದ.
"ಸ್ಕೂಲ್ ಜಾಕ್ ಆನೇಕು"
"ಇಸ್ಕೂಲ್ ಹೋಗಾಕೆ ನಿಂಗೆ ಸೇಂಕಲ್ ಬೇಕೇನೋ, ಚಾರ್ ಆಣ ದುಡಿಯಕ್ಕೆ ಹರ್ಕತ್ ಇಲ್ಲಾಂದ್ರೆನು ಶೋಕಿಗೆ"
"ಅಮ್ಮಿ ನೋಡು, ದಿನಾಗ್ಲೂ ನಾಲ್ಕು ಕಿಲೋಮೀಟರ್ ನಡಕೊಂಡು ಹೋಗ್ಬೇಕು, ಒಂದು ಸೆಕೆಂಡ್ ಹ್ಯಾಂಡಲ್ ಆದ್ರೂ ಕೊಡ್ಸಾಕ್ ಹೇಳು"
"ಸೆಕೆಂಡ್ ಹ್ಯಾಂಡಲ್ ಅಂತೆ, ಇಸ್ಕಿ!" ಅನ್ವರ್ ನ ಕಂಡು ಮೊಹೀಬ್ ಬೆದರಿದ.
ಸೈಕಲ್ ತನಗೆ ಅತ್ಯಗತ್ಯವಲ್ಲದಿದ್ದರೂ ಅನಾವಶ್ಯಕವಲ್ಲ ಎಂಬುದು ಮೊಹೀಬನಿಗೂ ತಿಳಿದಿತ್ತು.ಅಪ್ಪ ಪೋಲಿ ಅಲ್ಲದಿದ್ದರೂ ಅಂತಹ ಜಾಣನೂ ಏನಲ್ಲ ಇವ. ಊರಿನ ಹಲವು  ಮುಸಲ್ಮಾನರ ಕುಟುಂಬದ ನಂಬುಗೆಯಂತೆ ಓದು ಅನಿವಾರ್ಯವೇನಲ್ಲ.ಮೊಹೀಬ್ ಎಂಟನೇ ತರಗತಿ ಮೆಟ್ಟಿಲು ಹತ್ತಲು ಕಾರಣ ಹತ್ತನೇ ತರಗತಿವರೆಗೆ ಉಚಿತ-ಕಡ್ಡಾಯ ಶಿಕ್ಷಣ ಎಂಬ ಕಾನೂನು ಹೊರಡಿಸಿದ್ದಕ್ಕೆ. ಶಾಲೆಗೆ ಹೋಗದಿರೆ, ಮನೆ ಮುಂದೆಯೇ ಪ್ರತ್ಯಕ್ಷರಾಗುವ ಶಿಕ್ಷಕರು, ಅವರ ಪ್ರಶ್ನೆಗಳು, ಇವೆಲ್ಲದರ ಸಹವಾಸವೇ ಬೇಡ ಅಂತ ಅನ್ವರ್ "ಜಾರೇ ಇಸ್ಕೂಲ್ಕು, ಕ್ಯಾ ಪಡ್ಕಿ ಹಮೇ ಖಿಲಾಥ " ಅನ್ನುತಿದ್ದ.
 


                                                                                                 ೨


ನಮ್ಮೂರಿನ ಗಂಡಸರಿಗೆ ಅನ್ವರ್ ಒಂದು ಆದರ್ಶ. ಗಂಡಸರು ಮತ್ತೊಬ್ಬನನ್ನ ಆದರ್ಶ ಎನ್ನುವುದು ಅವನ ಸಾಧನೆ, ಐಶ್ವರ್ಯದಿಂದ ಮಾತ್ರವಲ್ಲ, ಬದಲಿಗೆ ಅವನ ಹೆಂಡತಿ ಗಂಡನಲ್ಲಿ ನಡೆದುಕೊಳ್ಳುವ ರೀತಿ ಇಂದ. ಅನ್ವರ್ ಖಾನ್ ಮೂರು ಹೆಂಡಿರ ಪ್ರೀತಿಯ ಗಂಡ. ನಾಲ್ಕೇ ಮಕ್ಕಳು. ಮೊಹೀಬ್ ಮೊದಲವ. ಅನ್ವರ್ ಗೆ ಏನು ದೊಡ್ಡ ಕೆಲಸವಲ್ಲ, ಕಬ್ಬಿಣದ ತವೆಯನ್ನು ಕುಲುಮೆಯಲ್ಲಿ ಮಾಡಿ,ಯಾವ ಊರಿನಲ್ಲಿ ಸಂತೆ ಇದೆಯೋ ಅಲ್ಲಿ ಹೋಗಿ ಮಾರಿ ಬರುವುದು.ಹಳ್ಳಿಗಳಿಗೆಲ್ಲ ಗ್ಯಾಸ್ ಬಂದು, ಅಲ್ಲ್ಯೂಮಿನಿಯಂ ತವಾ, ನಾನ್ -ಸ್ಟಿಕ್ ತವಾ ಎಲ್ಲಾ ಬಂದು ಇವನ ತುಕ್ಕು ಹಿಡಿವ ಕಬ್ಬಿಣದ ಬಿಸಿ ತಣ್ಣಗಾಗ ಹತ್ತಿತ್ತು.ಆದರೂ ರೊಟ್ಟಿ ಸುಡಲು ಇದೆ ವಾಸಿ ಅಂತ ಖರೀದಿಸುವವರ ಸಂಖ್ಯೆ ಅಷ್ಟಿಷ್ಟು ಉಳಿದಿತ್ತು.

ಸಂಸಾರದಲ್ಲಿ ಗಂಡ -ಹೆಂಡಿರ ಪಾತ್ರ ಅದು ಕೇವಲ ಯಾಂತ್ರಿಕವಾಗಿ ತನ್ನಿಂದ ತಾನೇ ಸಾಗುವ ರಾಟೆಯೆಂತಲೂ, ಆಗೀಗ ತಾಂತ್ರಿಕ ದೋಷ ಉಂಟಾದಾಗ ಯಂತ್ರಕ್ಕೆ ಕೀಲೆಣ್ಣೆ ಹಚ್ಚುವುದೊಂದೇ ತನ್ನ ಕೆಲಸವೆಂತಲೂ ಇವ ನಂಬಿದ್ದ. ಒಂದೇ ಹೆಂಡಿರನ್ನ ಸಂಬಾಳಿಸಲಾಗದ ಊರಿನ ಹಲವು ಗಂಡಸರಿಗೆ ಇವನು ಆದರ್ಶಪ್ರಾಯನಾಗಲು ಇದು ಸಾಕಿತ್ತೇನೋ.ಇವನ ಹೆಂಡಿರು ಕಿತ್ತಾಡಿದ್ದನ್ನು ಯಾರು ಕಂಡಿರಲಿಲ್ಲ, ಇದಕ್ಕೆ ಕಾರಣ, ಅನ್ವರ್ ಯಾರನ್ನೂ ಹೆಚ್ಚು ಪ್ರೀತಿಸದೆ, ಸಿಟ್ಟು ಹೆಚ್ಚಾದಾಗ ಮೂರೂ ಹೆಂಡಿರನ್ನ ಸರಿಸಮಾನವಾಗಿ ಹೊಡೆಯುತ್ತಿದ್ದ. ಒಮ್ಮೆಯಂತೂ ಕುಲುಮೆಯಲ್ಲಿ ಇವ ಕೆಲಸ ಮಾಡುತ್ತಾ ಕುಳಿತಿರುವಾಗ ಎರಡನೇ ಹೆಂಡತಿ ಕುಡಿಯಲು ನೀರು ತಂದವಳು,ಕೈ ಚೆಲ್ಲಿ, ನೀರನ್ನೆಲ್ಲ ಇವನ ಸುಡುವ ತವೆಯ ಮೇಲೆ ಸುರಿದಳು.ಸಿಟ್ಟಿಗೆದ್ದ ಅನ್ವರ್ ಅವಳನ್ನೇನೋ ಅಟ್ಟಾಡಿಸಿ ಹೊಡೆದ, ಬಟ್ಟೆ ಒಗೆಯಲು ಹೋದ ಮೊದಲನೇ ಹೆಂಡತಿ ವಾಪಾಸ್ ಬಂದ ಮೇಲೆ ಅವಳಿಗೂ ಸಮಾನ ಏಟು ಕೊಟ್ಟ. ಕಾರಣವೇನೆಂದು ಕೇಳಿದ ಕೊನೆಯ ಹೆಂಡತಿಯ ಗತಿ ಏನಾಯಿತೆಂದು ಬೇರೆ ಹೇಳಬೇಕೇ? ಹೀಗೆ ಇವನ ನಾಝಿ ಅಧಿಕಾರದಡಿಯಲ್ಲಿ ಹೊರಗಿನ ಪ್ರಪಂಚಕ್ಕೆ ಇದೊಂದು ಸುಖೀ ಸಂಸಾರವಾಗಿದ್ದಿತು.


                                                                                                ೩


ತಾನು  ಸಂತೆಗೆ ಹೋದಾಗ ಕಿವಿಗೊಂದು ವಿಷಯ ಬಿದ್ದಿತು. ಮುಂದಿನ ತಿಂಗಳು ಮಿನಿಷ್ಟ್ರು ಬಂದು ಹೈ ಸ್ಕೂಲ್ ಹುಡುಗ-ಹುಡುಗಿಯರಿಗೆಲ್ಲ ಸೈಕಲ್ ಹಂಚುತ್ತಾರೆ ಎಂದು.
"ಅಯ್ಯೋ. ಈ ಹರಾಮ್ ಸರ್ಕಾರ ಸೇಂಕಲ್ ಕೊಡ್ಸೋದ್ ಉಂಟಾ?" ಹೆಂಡಿರನ್ನುದ್ದೇಶಿಸಿ ಕೇಳಿದ.
"ಏನೋ ಎಲ್ಲಾ ಮಕ್ಳಿಗೆ ಕೊಡ್ತಾರೆ ಅಂತೆ, ಮೊಬೀನ ನು ಹೇಳ್ತಿದ್ಲು" ಯಾವುದೊ ಒಂದು ಹೆಂಡತಿ ಉತ್ತರಿಸಿದಳು.
"ನೆಟ್ಟಗೆ, ಬುಕ್ಸು, ಬ್ಯಾಗು, ಕೊಡ್ಸೋ ಹರ್ಕತ್ತಿಲ್ಲದ ಸರ್ಕಾರ, ಇವರಿಗೆ ಸೇಂಕಲ್ ಕೊಡ್ಸೋ ಉಸಾಬರಿ ಯಾಕಂತ?, ಅದ್ರಾಗೂ ಅಷ್ಟಿಷ್ಟು ತಿಂತಾವೆ, ಉಳಿದ ದುಡ್ಡ್ನಲ್ಲಿ, ಹರಕು-ಮುರಕು ಸೇಂಕಲ್ ಕೊಟ್ಟು, ಪೇಪರ್ ನಾಗೆ ಫೋಟೋ ಹಾಕ್ಸಿ, ಆ ಸೇಂಕಲ್ ರಿಪೈರಿ ಖರ್ಚು ನಮ್ಮ ತಲೆಗೆ ತಂದಿಡ್ತಾರೆ. ತಿಂಗಳಿಗೆ ನೂರು ರೂಪಾಯಿ  ಕೊಡ್ಬೇಕ್ ಸರ್ಕಾರ, ಸೇಂಕಲ್ ರಿಪೈರಿಗೆ ಅಂತ, ಏನ್ ಸರ್ಕಾರವೋ" 
"ಇನ್ಷ-ಅಲ್ಲಾ, ಮೊಹೀಬ್ಗೂ ಒಂದು ಒಳ್ಳೆ ಸೇಂಕಲ್ ಸಿಗಲಿ ಬಿಡಿ" ಮತ್ತೊಂದು ಹೆಂಡಿರ ಉತ್ತರ ಸಿದ್ಧವಿತ್ತು.
ತಾತ್ಸಾರ ಭರಿತ ಸಂವಾದದ ನಡುವೆ, ಮೊಹೀಬ್ ಹೊಸ ಸೈಕಲ್ ಬರುವ ಕನಸು ಕಾಣ ಹತ್ತಿದ್ದ.
"ಅಮ್ಮಿ, ನಂಗು ಸಿಗತ್ತೆ ಅಲ್ವಾ?"
"ಹುಂ, ಮೇರಾ ಬಚ್ಚಾ ಮಿಲ್ತಾ"
"ಆ ಸೈಕಲ್ ಗೆ ಮುಂದೆ ಒಂದು ಬುಟ್ಟಿ ಬೇರೆ ಕಟ್ಟಿರ್ತಾರೆ ಗೊತ್ತಾ?" ತನ್ನ ಮಾತನ್ನ ಯಾರು ಕೇಳದಿದ್ದರೂ ತನಗೆ ತಾನೇ ಕನಸು ಕಾಣುತ್ತಾ, ಸೈಕಲ್ ಗೆ ಮಾಡಬೇಕಾದ alteration ಬಗ್ಗೆ ಯೋಚಿಸತೊಡಗಿದ. ಸ್ವಗತದಿಂದೆಂಬಂತೆ, "ಸೀನಣ್ಣನ ಅಂಗಡಿಗೆ ತಗೊಂಡು ಹೋಗಿ ಒಂದು ವೂಮ್,ವೂಮ್ ಅನ್ನೋ ಹಾರ್ನ್ ಹಾಕಿಸ್ಬೇಕು, ರಾತ್ರಿ ಓಡಿಸೋಕೆ ಒಂದು ಲೈಟು, ಡೈನಮೊ ಕೂರಿಸಿ ಲೈಟು ಹತ್ತಿಸಬೇಕು, ಸ್ಪೋಕ್ಸ್ ಗಳಿಗೆ ಕೆಂಪು ರೇಡಿಯಂ, ಒಹ್ ! ಒಂದೊಳ್ಳೆ ಸೀಟ್ ಕವರ್ ಬೇಕೇ ಬೇಕು" ತಿಂಗಳಿಡೀ ಇವೇ ಯೋಚನೆಗಳಿವನಿಗೆ.

                                                                                                ೪


ತಿಂಗಳು ಕಳೆದು ಆ ದಿನ ಬಂದೇ  ತೀರಿತು.ತನಗೇನೂ ಕೆಲಸವಿಲ್ಲದಿದ್ದರೂ, ಪೈಜಾಮಕಿಂತ ದೊಡ್ಡದಾದ ಕುರ್ತಾ ಧರಿಸಿ ಅನ್ವರ್ ಸಹ ಮಂತ್ರಿಗಳ ಕಾರ್ಯಕ್ರಮ ನೋಡ ಹೋರಾಟ.ನೂರಾರು ಹೊಸದಾದ ಅಟ್ಲಾಸ್ ಸೈಕಲ್ ಗಳು ಬಿಸಿಲಲ್ಲಿ ಹೊಳೆಯುತ್ತ ನಿಂತಿದ್ದವು. ಹಲವು ಪೊಲೀಸರು ಸುಖಾ-ಸುಮ್ಮನೆ ಆಚೀಚೆ ಓಡಾಡುತ್ತ, ನೆರೆದವರ ಕಣ್ಣಲ್ಲಿ ತಮ್ಮ ಬಗ್ಗೆ ಇರುವ ಭಯಕ್ಕೆ ಬೀಗುತ್ತಿದ್ದರು. ಮಕ್ಕಳದ್ದೇನು ಕೇಳುವುದು? ಎರಡು ಕಿವಿಯವರೆಗೆ ತುಟಿಗಳನ್ನ ಹರಿದು ಹಿಗ್ಗನ್ನ ತೋರ್ಪಡಿಸುತ್ತಾ, ನಿಂತಿರುವ ಸೈಕಲ್ ಗಳ ಪೈಕಿ ತಮಗ್ಯಾವುದು ದಕ್ಕೀತೆಂದು ಲೆಕ್ಕ ಹಾಕುತ್ತ ನಿಂತಿದ್ದರು. ಮೊಹೀಬ್ ತನ್ನ ತಮ್ಮ ಶಾಹೀದ್ ಜೊತೆ ನಿಂತಿದ್ದ. ಶಾಹೀದ್ ಈಗ ಏಳನೇ ತರಗತಿ ಹೋಗುವುದಿದ್ದರಿಂದ ಅವನಿಗೆ ಸೈಕಲ್ ಭಾಗ್ಯವಿದ್ದಿಲ್ಲ.ತನ್ನಣ್ಣನ ಪಾಲಾಗುವ ಸೈಕಲ್ ನಲ್ಲಿ ತಾನು ಊರು ಸುತ್ತಬಹುದೆಂಬ ಹಂಚಿಕೆ ಇವನದ್ದು. ಕಾರ್ಯಕ್ರಮಕ್ಕೆ ಸಂಭಂದವಿರದ ಮಂತ್ರಿಗಳ ಭಾಷಣ, ಇತ್ತೀಚಿನ ಚುನಾವಣೆ, ಸರ್ಕಾರದ ಸಾಧನೆ, ವಿರೋಧ ಪಕ್ಷದ ಸೆಕ್ಸ್ CD ವಿಚಾರ,ಅದು-ಇದು ಕಾಡುಹರಟೆಯೊಂದಿಗೆ ಮುಗಿವ ಕಾಲಕ್ಕೆ ಮಕ್ಕಳ ಮುಖದಲ್ಲಿ ಅಸಹನೆ ಹೊಗೆಯಾಡುತ್ತಿತ್ತು. ಅಂತೂ-ಇಂತೂ ಕಾಲ ಕೂಡಿ ಬರಲು ಸೈಕಲ್ ಹಂಚಲ್ಪಟ್ಟವು. ಎಲ್ಲಾ ಸೈಕಲ್ ಗಳು ಒಂದೇ ರೀತಿ ಇರುವುದರಿಂದ, ಮೊಹೀಬ್ ಮನೆಗೆ ಬಂದವನೇ ಮಡ್-ಗಾರ್ಡ್ ಮೇಲೆ ದೊಡ್ಡದಾಗಿ ಕರೆಕ್ಷನ್ ಪೆನ್ ಹಿಡಿದು ತನ್ನ ಹೆಸರನ್ನ ಕೆತ್ತಿದ.


ಮನೆಗೆ ಸೈಕಲ್ ಏರಿ ಅಣ್ಣ-ತಮ್ಮ ಬಂದ ಕೆಲ ಸಮಯಕ್ಕೆ ಅನ್ವರ್ ಮನೆ ತಲುಪಿದ. ಸೈಕಲ್ ನ ಮೇಲಿಂದ ಕೆಳಗೆ ಹಲವಾರು ಬಾರಿ ನೋಡಿದ ಅನ್ವರ್ ಒಳಹೊಕ್ಕ.
"ಮಿಲ್ಗಯಾಕೀರೇ, ತುಂನ ಏಕ್ ಘೋಡಾ?" ಅಂತ ಕೇಳುತ್ತ ಬಂದ ತಂದೆಗೆ ಏನೂ ಉತ್ತರಿಸದ ಮೊಹೀಬ್, ಈ ಶುಕ್ರವಾರ ಸೈಕಲ್ ನಲ್ಲಿ ಮಸೀದಿಗೆ ಹೋದಾಗ ಅದನ್ನೆಲ್ಲಿ ನಿಲ್ಲಿಸೋದು ಅಂತ ತನ್ನನೇ ಪ್ರಶ್ನಿಸತೊಡಗಿದ್ದ"


                                                                                              ೫


"ಅಮ್ಮಿ... , ಅಮ್ಮಿ... ಮೇರಾ ಸೈಕಲ್ ದೇಖೇ?" ಶುಕ್ರವಾರ ರಜೆಯಾದ್ದರಿಂದ ಸ್ವಲ್ಪ ತಡಮಾಡಿ ಎದ್ದ ಮೊಹೀಬ್ ಕೇಳಿದ.
"ಹೋಗೋ , ಮೊದ್ಲು ಮುಖ ತೊಳೆದು ಬಾ" ಅನ್ವರ್ ಗುಡುಗಿದ.
ಸಂಶಯ ಸಣ್ಣಗೆ ಮೋಹೇಬನ ಮನದಲ್ಲಿ ರೆಕ್ಕೆ ಬಿಚ್ಚತೊಡಗಿತ್ತು.
ತನಗೆ ತಾನೇ ಎಂಬಂತೆ, ಅನ್ವರ್ ಮೋಹೇಬನ ಸಂಶಯದ ರೆಕ್ಕೆ-ಪುಕ್ಕಗಳ ಸುಡುತ್ತಾ, "ನಿಂದು ಸೇಂಕಲ್ ನ ನಾನು ಸೀನಣ್ಣನ ಅಂಗಡಿಗೆ ಕೊಟ್ಟಿದೀನಿ, ಶಾಹೀದ್ ಹೆಂಗು ಮುಂಧ್ನ ವರ್ಸಾ ಆಟವೀ ಹೋಗ್ತಾನೆ, ಆವಾಗ ಅವಂಗೂ ಸೇಂಕಲ್ ಕೊಡ್ತಾರೆ, ಅದ್ರಾಗೆ ಊರು ಸುತ್ತಿ ಇಬ್ರು, ಇವಾಗೇನು ಜರೂರತ್ ಇದೆ ಅದ್ರದ್ದು ಅಲ್ವಾ?" ಮನಸೋ ಇಚ್ಛೆ ತನ್ನ ಹೆಂಡಿರ ಬೈಯುತಿದ್ದ ಅನ್ವರ್ ನ  ಅದರಗಳು ಇಂದು ಒಣಗಿದ್ದವು.
ಅಪ್ರಯತ್ನಪೂರಕವಾಗಿ ಮೋಹೇಬನ ಕಣ್ಣಚಿನಲ್ಲಿ ಉಪ್ಪು ನೀರು ಶೇಖರಗೊಳ್ಳತೊಡಗಿತ್ತು.ಇದನ್ನ ಗಮನಿಸಿದ ಅನ್ವರ್,
"ಯಾ ಅಲ್ಲಾ, ನಾನೊಬ್ಬನೇ ಸೇಂಕಲ್ ಕೊಟ್ಟಿಲ್ಲ, ಹಮಾರಾ ಅಲ್ಲೂ ಇದ್ದಾನಲ್ಲ , ಆವಂದ್ ಮಗನ ಸೈಕಲ್ ಸೀನಣ್ಣನ ಅಂಗಡೀಲೇ ಇರೋದು"
ಕಸಿವಿಸಿಯೆನಿಸಿ ಅನ್ವರ್ ಮನೆಯಿಂದ ಕಾಲ್ಕಿತ್ತ.
"ತಿಂಡಿ ತಿಂದು ಮಸೀದಿಗೆ ಹೋಗು" ತಾಯಿ ಮೈದಡವಿದಳು.
ಮಸೀದಿ ಹಾದಿಯಲ್ಲೇ ಇದ್ದ ಸೀನಣ್ಣನ ಅಂಗಡಿಯ ಮುಂದೆ ಹತ್ತಾರು ಹೊಸ ಸರ್ಕಾರಿ ಸೈಕಲ್ ಗಳ ಮಧ್ಯೆ ಇವನ ಸೈಕಲ್ ಕರೆಕ್ಷನ್ ಪೆನ್ ಕೆತ್ತನೆ ಹೊತ್ತು ನಿಂತಿತ್ತು.
ಕಣ್ಣೀರು ನಿರರ್ಗಳವಾಗಿ ಮೊಹೀಬ್ ನ ಕೆನ್ನೆಯಿಂದಿಳಿಯುತಿದ್ದವು.

1
Reading under T&C