Kannada · Fiction

ಸತ್ಯ ಕಥೆ

Writer DP! Preetham Pais 06 Oct 18 26 Views
ಈ ಕಥೆ , ಸತ್ಯ ಕಥೆ. ಸತ್ಯ ಕಥೆ ಎಂದರೆ ಘಟಿಸಿದ ಕಥೆಯೇ ಆಗಬೇಕೆಂದಿಲ್ಲ. ಕಥೆ ಸತ್ಯಎಂದರ್ಥ. ಹಾಗಾದರೆ ಇಲ್ಲಿ ಕಥೆ ಮುಖ್ಯವೋ ? ಸತ್ಯ? ನಿರ್ವಿವಾದಿತ ಸತ್ಯವೊಂದು  ಕಥೆಯಾದರೆ ಅಭಿವ್ಯಕ್ತಿಗೆಲ್ಲಿಯ ಹಾದಿ, ಕಥೆಯೊಂದು ಸತ್ಯಹೇಳಿದರೆ ಅದು ಮಥನಕ್ಕೊಂದು ರಹದಾರಿ.

ಈ ಕಥೆ ಮನದಲ್ಲಿ ಹೊಂಚು ಹಾಕಿ ಕುಳಿತದ್ದೇ ಕೆಳಗೆ ತಿಳಿಸುವ ಘಟನೆಗಳು ಜರುಗಿದಾನಂತರ.
ನಾನಾಗ 12 ವರುಷದವನಿದ್ದಿರಬೇಕು. ಚನ್ನಗಿರಿಯ ಚರ್ಚು ನಮ್ಮ ಮನೆಯಿಂದ ಸುಮಾರು 1 ಮೈಲು ದೂರಕ್ಕಿದೆ. ಒಂದು ಸಂಜೆ ಆ ದಾರಿಗುಂಟ ಹೋಗುವ ಪ್ರಮೇಯ ಬಂದಿತ್ತು. ಸೈಕಲ್ ಹತ್ತಿ ಏರು ರಸ್ತೆಯಿದ್ದ ಆ ದಾರಿ ಸವೆಸಲು, ಒಮ್ಮೆಲೇ ಗಾಳಿ ಮಳೆಯ ದರ್ಶನವಾಯ್ತು. ಆ ಹಾದಿಯಲ್ಲಿ ನೆರಳಿಗೆ ನೆಟ್ಟ ಮರಗಳು ಒಂದಕ್ಕೊಂದು ಬಡಿದಾಡಿಕೊಳ್ಳುವಂತೆ ತಮ್ಮೆಲ್ಲ ರೆಂಬೆ ಕೊಂಬೆಗಳನ್ನ  ಅತ್ತಿಂದಿತ್ತ ಬಡಿಯುತ್ತಿದ್ದವು. ಮಳೆಯೆಂದರೆ ಮಳೆ. ನಾನೋ ಇದ್ಯಾವುದರ ನಿರೀಕ್ಷೆಯಿಲ್ಲದೆ ಬರಿಗೈ ದಾಸನಂತೆ ಮನೆ ಬಿಟ್ಟಿದ್ದೆ. ಮಳೆಯಲ್ಲಿ ತೋಯ್ದು ತೊಪ್ಪೆಯಾದ ನನ್ನನ ಗುರುತು ಹಿಡಿದದ್ದು ನನ್ನಂತೆ ನೆನೆದು ಉಂಡೆಯಾಗಿ ಶಕ್ತಿಮೀರಿ ಕೂಗುತಿದ್ದ ಕರಿ ಕಾಗೆ. ಬೆಳ್ಮುಗಿಲು ಕಪ್ಪುಗಟ್ಟಿ ಮಳೆ ನಿಲ್ಲುವ ಸೂಚನೆ ದೃಷ್ಟಿಗೋಚರವಾಗುವ ಲಕ್ಷಣ ಕಾಣದೆ, ಮರದ ಬುಡದ ಬಳಿ ಆಸರೆ ಪಡೆದು ನಿಂತೆ. ರಸ್ತೆ ಮೇಲೆ ಹರಿವ ನೀರನ್ನ ಚೂರುಗಟ್ಟಬೇಕೆಂಬ ದೀಕ್ಷೆ ತೊಟ್ಟಂತೆ ಬಸ್ಸು, ಟ್ರೆಕ್ಕುಗಳು ನುಗ್ಗಿ ಮರೆಯಾದವು. ಸಂಜೆಗತ್ತಲು ಊರನ್ನೆಲ್ಲ ಹೊದೆಯಲು ಹವಣಿಸುತ್ತಿತ್ತು. ಮೈ ಚಳಿಗೆ ನಡುಗುತಿತ್ತೋ, ಭಯಕ್ಕೆ ನಡುಗುತಿತ್ತೋ? ವ್ಯತ್ಯಾಸ ಗುರುತಿಸುವುದು ಕಷ್ಟವಾಯ್ತು. ಹೇಗೆ ಮೋಡದಿಂದ ಮಳೆ ಒತ್ತರಿಸಿ ಬರುತ್ತೋ , ಅಂತೆಯೇ ಮೂತ್ರವೂ! ಹೊರಗಣ ಚಳಿಗೆ ತಡಿಯಲಸಾಧ್ಯ ಮೂತ್ರ ಹೊಮ್ಮಿ, ತನಗೆ ಅನುವುಮಾಡಿದ್ದ ಸ್ಥಳವನ್ನ ಮೀರಿ, ಚಿಮ್ಮಿ-ಚಿಲುಕಿ ಹೊರಬಂದಿತು. ಹೇಗಿದ್ದರೂ ಮನೆಗೆ ಹೋಗಿ ಸ್ನಾನ ಮಾಡಿದರಾಯ್ತು ಅಂದು, ನಾನು ಸಹ ತಣ್ಣೀರ ಮಳೆಗೆ ಬಿಸಿನೀರ ಲೇಪ ಕೊಡ ಒಪ್ಪಿದೆ!
ನನಗೀಗ 28 ವಯಸ್ಸು. ಪುಟ್ಟ ತಾಲೂಕಿನಿಂದ ಬೆಂಗಳೂರಿಗೆ ವಾಸ ಬದಲಾಗಿದೆ. ಅದೊಂದು ಸಂಜೆಯೂ ಹಾಗೆ. ಯಥಾವತ್ತು. ಆಫೀಸಿನಿಂದ ಮನೆಗೆ ಹೊರಡಬೇಕು , ಮಳೆದೇವ ಆಫೀಸ್ ಹೋಗುವರ ಮೇಲೆ ಶಕ್ತಿ ಪ್ರದರ್ಶನಕ್ಕೆ ತೀರ್ಮಾನಿಸಿದಂತೆ ಸುರಿಯತೊಡಗಿದ. ಈ ಊರ ಮಳೆಯೇ ವಿಚಿತ್ರ. ಸುರಿವುದು 10 ನಿಮಿಷವಾದರೆ ಅದರ ಪರಿಣಾಮ ಘಂಟೆಗಟ್ಟಲೆ. ತನ್ನೂರ ಕಾಮಗಾರಿಗಳ ಬೆತ್ತಲೆ ಪ್ರದರ್ಶನ ಮಾಡುವ ಮಳೆ , ಇಳೆಯಲ್ಲಿ ಇಂಗದೆ ರಸ್ತೆಯನ್ನೆಲ್ಲ ಗುಡಿಸಿ-ಸಾರಿಸಿ, ಮನುಷ್ಯನ ಉಚ್ಚಿಷ್ಠಗಳನ್ನೆಲ್ಲ ಹೊಯ್ದು , ಅವನೇ ಕುಡಿಯಲು ತೋಡಿದ ಕೆರೆ-ಕಟ್ಟೆಗೆ ಸುರಿಯುತ್ತದೆ!.  ಬೆಂಗಳೂರ ಮಳೆಗೆ ನೆನೆದರೆ ಇಲ್ಲದ ರೋಗ ಬರುವುದು ಶತಸಿದ್ಧ. ಸಮಸ್ಯೆ ತಲೆ ಮೇಲೆ ಬೀಳುವ ನೀರಿನದ್ದಲ್ಲ, ಕಾಲ ಸವರಿ ಹೋಗುವ ನೀರ ಬಣ್ಣಕ್ಕೆ ಹೊಟ್ಟೆಯ ನರನಾಡಿದಳು ಮೀಟಿ-ಮಿಸುಕಿ ತಿಂದ ಅನ್ನವನ್ನ ಯಾವುದಾದರು  ದಾರಿಯಲ್ಲಿ ಹೊರಹಾಕ ಬಯಸುತ್ತದೆ. ಪರಿಸ್ಥಿತಿ ಹೀಗಿರೆ, ನನ್ನ ಬೈಕ್ ನ್ನ ಆಫೀಸ್ ನ ಪಾರ್ಕಿಂಗ್ ಸ್ಪೇಸ್ ನಲ್ಲಿ ನಿಲ್ಲಿಸಿ ಮನೆಸೇರುವುದು ಉಚಿತವೆಂದು ಯೋಚಿಸುತ್ತ ನಿಂತೆ.

ಹೀಗೆ ನಡುಗುವ ಮೈಗೆ, ದೂರದಿಂದ ಬೆಳಕೊಂದು ನನ್ನೇ ಹಿಂಬಾಲಿಸಿ ಬಂದಂತಾಯ್ತು. ಒಂದೇ ದೀಪ ಹೊತ್ತಿಸಿ ಬರುತ್ತಿದ್ದರಿಂದ ಯಾವುದೊ ಬೈಕಿನವ ಮಳೆಗೆ ಆಸರೆಪಡೆಯಲು ನಾನಿರುವೆಡೆಯೇ ಬರುತ್ತಿದ್ದಾನೆ ಎಂದೆಣಿಸಿದೆ. ಆ ಬೆಳಕು ಚಲಿಸುತ್ತಾ, ಅದರ ಪ್ರಕಾಶ ನನ್ನ ಸೈಕಲ್ ಹಾಗು ಮುಖದ ಮೇಲೆ ಬಿದ್ದು, ನಮ್ಮ ನೆರಳು ಮರದ ಬೊಡ್ಡೆಯಮೇಲೆ ನಲಿದಾಡ ಹತ್ತಿತು. ಆ ವಾಹನ ಇನ್ನೂ ಹತ್ತಿರಕ್ಕೆ ಬರಲು ನನ್ನ ಸೈಕಲ್ ನೆರಳು ನನಗಿಂತಲೂ, ನನ್ನ ನೆರಳು ಮರಕ್ಕಿಂತಲೂ ದೊಡ್ಡದಾಗಿ, ಮರದ ನೆರಳು ಭುವಿಯನ್ನೇ ಅವರಿಸುವಷ್ಟು ದೊಡ್ಡದಾಗಿ ಹೋಯ್ತು. ಹತ್ತಿರ ಬಂದಾಗಲೇ ತಿಳಿದದ್ದು ಅದು ಒಂದು ರಿಕ್ಷಾ ಎಂದು. ಹೆಡ್ಲೈಟ್ ಆರಿಸದೆ ಅದರಿಂದ ಇಳಿದ ಆಸಾಮಿಯೊಬ್ಬ,  'ಹೆಲ್ಲಿಗೆ ಓಗ್ಬೇಕು' ಎಂದ.  "ಮನೆಗೆ' ಎಂದೆ ನಾನು.  'ಇಸ್ಕಿ ಮನೆ ಹೆಲ್ಲಿ' ಎಂದನವ. 'ಬಸ್ ಸ್ಟಾಂಡ್ ಹತ್ತಿರ' ಎಂದೆ. 'ನಿಂದಾ ಸೇಂಕಲ್ಲು?' ಪ್ರಶ್ನಿಸಿದ. ತಲೆಯಾಡಿಸಿದೆ. 'ನ್ಹಡೀ' ಎಂದವನೇ ಒಂದೇ ಕೈಯಲ್ಲೂ ನನ್ನ ಪುಟ್ಟ ಸೈಕಲ್ ಎತ್ತಿ ತನ್ನ ರಿಕ್ಷಾ ಒಳಗೆ ತೂರಿಸಿ, ನನ್ನನೂ ಕೂರಿಸಿ, 'ಇಡ್ಕೊ ಕೂರು ,ಅಪ್ಪನ ಹತ್ತಿರ 10 ರೂಪಾಯಿ ಕೊಡ್ಸು ' ಎಂದ.
ಆಫೀಸಿನಿಂದ ನನ್ನ ಮನೆಯೊಂದು 8km ದೂರವಿದ್ದಿತ್ತು. ಕ್ಯಾಬ್ ಮಾಡಿ ಹೋದರೆ ಹೆಚ್ಚಾದೀತೆಂದು, ಆಟೋ ಹಿಡಿವ ಯೋಚನೆ ಮಾಡಿದೆ. ಸಮಯ 6 ಘಂಟೆ ಮೀರಿದ್ದಿಲ್ಲ. ಮಳೆಯ ಹಾದಿಯಲ್ಲೇ ನಿಧಾನಕ್ಕೆ ಚಲಿಸುತ್ತಿದ್ದ ಆಟೋ ಒಂದನ್ನ ಕರೆದು ನಿಲ್ಲಿಸಿದೆ.  'ಎಲ್ಲಿಗೆ ಸ್ಸಾರ್' ಕೇಳಿದ  ಮನೆಯ ವಿವರ ತಿಳಿಸಿದೆ. '400 ಕೊಡಿ' ಒಂದೇ ಕ್ಷಣಕ್ಕೆ ಹೇಳಿ ಮುಗಿಸಿದ. '400 ರ , 100 ರೂಪಾಯಿ ಆಗೋದೇ ಕಷ್ಟ 400 ಕೇಳ್ತೀರಲ್ಲ' ಎಂದೆ  ಅರೆಕ್ಷಣ ಆಟೋ ನನ್ನ ಮುಂದಿನಿಂದ ಮಂಗ ಮಾಯಾ.  ಪ್ಯಾಂಟು ಮೇಲಕ್ಕೆತ್ತಿ, ಬ್ಯಾಗ್ ಅನ್ನ ಎದೆಗೆ ಒತ್ತಿ , ಆಫೀಸ್ ಪಾರ್ಕಿಂಗ್ ಸ್ಪೇಸ್ ನೆಡೆ ಮುಖ ಮಾಡಿದೆ. 
ಕಥೆ ಸತ್ಯವೇ, ಆದರೆ ಕಥೆಯಲ್ಲಿನ ಸತ್ಯ ವಿಹಿತವೆ? 
0
Reading under T&C