Kannada · Fiction

ಥೂ

Writer DP! Preetham Pais 02 Jan 17 44 Views
ಬಸ್ಸಿನ ಪ್ರಯಾಣಕ್ಕೆ ನಾನೆಂದು "ಬಸ್" ಎಂದದ್ದಿಲ್ಲ.ಸರ್ಕಾರಿ ಬಸ್ಸುಗಳಿಗಿಂತ ಖಾಸಗಿ ಬಸ್ಸುಗಳಲ್ಲಿ ಪ್ರಯಾಣ ಆನಂದಿಸುವವ ನಾನು.ಸರ್ಕಾರಿ ಬಸ್ಸಿನ ಖಾಕಿ ವಸ್ತ್ರಧಾರಿ ಕಂಡಕ್ಟರ್,ಸ್ಪೀಡ್ ಗೊವೆರ್ನೆರ್ ಸಹಾಯದಿಂದ ಏಕ ಗತಿಯಲ್ಲಿ ಚಲಿಸುವ ಬಸ್ಸು, ಚೌಕಾಸಿಗೆ ಎಡೆಕೊಡದೆ ಒಂದೇ ಪ್ರಮಾಣದಲ್ಲಿ ಹಣ ಕೀಳುವ ಟಿಕೆಟ್ ಮಷೀನ್ಗಳು ಒಂದೆಡೆಯಾದರೆ, ದಿಗ್ ದಿಗ್ ಅಂತ ಜೋರಾಗಿ ಬಡಿಯೋ ಸ್ಟೀರಿಯೋ, ಸುಖಾ ಸುಮ್ಮನೆ ಹುರ್ರ್, ರೈಟ್, ಹೊಯ್ಯ ಅನ್ನೋ ಖಾಸಗಿ ಬಸ್ಸಿನ ಕಂಡಕ್ಟರ್, ಚಿಲ್ಲರೆ ಕೇಳಿ ಇಸ್ಕೊಳ್ರಿ ನಾ ಮುಂದೆ ಇಳ್ಕೋತೀನಿ ಅನ್ನೋ ಏಜೆಂಟ್, ಆಗೀಗ ಘಂಟೆ ಗಮನಿಸ್ತಾ ಮುಂದಿನ ಸ್ಟಾಪ್ ನಲ್ಲಿ ಜಾಗ ಗಿಟ್ಟಿಸಲು  ವೇಗವಾಗಿ ಓಡಿಸೋ ಡ್ರೈವರ್, ಹಾಫ್ ಟಿಕೆಟ್, ಸಿ, ರೆಗ್ಯುಲರ್ ಇದೆ  ಬಸ್ ಕಣಮ್ಮ ನಮ್ದು... , ಸ್ಟೂಡೆಂಟ್ ಅಣ್ಣ..., ಅಂತ ರಿಯಾಯ್ತಿ ಗಿಟ್ಟಿಸೋ ಪ್ರಯಾಣಿಕರು ಇದೆಲ್ಲ ಮತ್ತೊಂದು ಕಡೆ. ಇಂತಿರೆ ಖಾಸಗಿ ಬಸ್ ಪ್ರಯಾಣ ನನಗೆಂದು ಅಹ್ಲಾಧಕರ.

ಹಾಗೆ ಮೊನ್ನೆ ಶಿವಮೊಗ್ಗ ಹೋಗೋ ಪ್ರಸಂಗ ಎದುರಾಯ್ತು.ಇಷ್ಟಪಟ್ಟು ಚಂದಗೆ ಸಿಂಗರಿಸಿ ನಿಂತಿದ್ದ ಖಾಸಗಿ ಬಸ್ ಹತ್ತಿದೆ, ಪಕ್ಕದಲ್ಲೇ ಕಳೆದ ಆಯುಧ ಪೂಜೆಗೆ ತೊಳೆದ ಸರ್ಕಾರೀ ಬಸ್ ನನ್ನ ಮನ ತೃಪ್ತಿಪಡಿಸಲಿಲ್ಲ.ಬಸ್ ತುಂಬಾ ಜನಗಳು ಹತಿದ್ರು, ಪುಣ್ಯಕ್ಕೆ ನನಗೆ ಬಾಗಿಲ ಬಳಿಯ ವಿಂಡೋ ಸೀಟ್, ಸಂತೋಷಕ್ಕೆ ಪಾರವೇ ಇಲ್ಲ. ಆರಾಮ ಗಾಳಿಗೆ ತಲೆ ತೂರಿ, ಬಸ್ಸಿನ ಸ್ಪೀಕರ್ನ  ಗಂಟಲು ಹರಿದು ಕಿರುಚುತ್ತಿದ್ದ ಹಾಡನ್ನ ಕೇಳುತ್ತ ಮೈ ಮರೆತೆ.ಚನ್ನಗಿರಿಯ ಉಪ್ಪಾರಪೇಟೆ ಬಳಿಯೊಂದು ಬಸ್ ಸ್ಟಾಪ್ ಇದೆ.ಅಲ್ಲಿ ಗಂಡ, ಹೆಂಡತಿ, ಎರಡು ಮಕ್ಕಳ ಕುಟುಂಬ ಬುಸ್ಸ್ಯೇರಿತು.ಆದರೇನು, ಕೂರೋದಕ್ಕೆ ಸೀಟಿಲ್ಲದೆ, ಆ ಮಕ್ಕಳ ತಾಯಿ, ಅವೆರಡೂ ಮಕ್ಕಳು ನನ್ನದೇನೋ ಎಂಬಂತೆ, "ಸ್ಸಾರ್!!, ನಿಲ್ಲಿಸಿಕೊಳ್ಳಿ  ಮಕ್ಳನ್ನ ಸ್ವಲ್ಪ" ಅಂದು "ಹೋಗ್ರಪ್ಪ ಅಂಕಲ್ ಹತ್ರ ನಿಂತ್ಕೋಳಿ" ಅಂತ ಒಂದೇ ಉಸಿರಲ್ಲಿ ಹೇಳಿ ಆಯ್ತು. ಆ ಮಕ್ಕಳೋ,ಎಂದೂ ಕಾಣದ ಅಂಕಲ್ ಸಿಕ್ಕ ಖುಷಿಇಂದ ನನ್ನ ಕಾಲಬುಡಕ್ಕೆ ಬಂದು ನಿಂತವು.
ಬಸ್ಸು ಒಂದಿಪ್ಪತ್ತು ನಿಮಿಷದ ದಾರಿ ಕ್ರಮಿಸಿರಬೇಕು.ನನ್ನ ಮುಂದೆಯೇ ಜೋತು ಬಿದ್ದಿದ್ದ ಹುಡುಗ, ಧಿಗ್ಗನೆ ಎದ್ದುಬಿಟ್ಟ.ಮುಖದಲ್ಲಿ ಚಿತ್ರವಿಚಿತ್ರ ಭಾವನೆಗಳು.ಅಸಹ್ಯ,ನಾಚಿಕೆ,ಕಷ್ಟ ಇನ್ನೇನೇನೋ.ಇದನ್ನ ಗಮನಿಸಿದ ಅವನಕ್ಕ "ಏನಾಯಿತೋ ತಿಪ್ಪೇಶಿ" ಅಂದ್ಲು.ಅಲ್ಲಿವರೆಗೂ ಮಾತಾಡದೆ ಸುಮ್ಮನಿದ್ದ ಹುಡುಗ ಬಾಯಿ ಬಿಟ್ಟ, "ಯಾಕೋ ವಾಂತಿ ಬಂಧಾಂಗೆ ಆಗತೈತೆ ಕಣೆ!!".ಸುತ್ತಲೂ ನಿಂತವರು,ಕೂತವರು,ಮಲಗಿದ್ದವರು,ಹರಟೆ ಹೊಡೆಯ್ತಾ ಇದ್ದವರೆಲ್ಲ ಚಂಗನೆ ನೆಗೆದು ಕಳಕಳಿ ತೋರಿಸ್ತಾ "ಅಯ್ಯೋ! ಡೋರ್ ಹತ್ರ ನಿಲ್ಲಿಸರಪ್ಪ ಅವನನ್ನ" ಅಂತ ತಡಬಡಾಯಿಸಿದರು.ಡೋರ್ ಬಳಿಯ ಸೀಟು ನನ್ನದೇ ಆದ್ದರಿಂದ, ಈ ಹುಡುಗನ ಅಜೀರ್ಣವಾಗದ ಆಹಾರವನ್ನ ನೋಡೋ ಭಾಗ್ಯ ನೆನೆದು ಬೆನ್ನು ಮೂಳೆಯಲ್ಲಿ ವಿದ್ಯುತ್ ಸಂಚಲನವಾಯ್ತು.ಆ ಹುಡುಗನೋ, ನನ್ನ ಗಾಬರಿ ಅರಿತವನಂತೆ ಆಗೀಗ "ಊಫ್, ಊಫ್" ಅಂತ ಹೊಟ್ಟೆ ಕಿವುಚುತ್ತ, ಮುಖ ಹಿಂಡುತ್ತಾ,ಇನ್ನೇನು ಕಕ್ಕಿಕೊಳ್ಳುವವನಂತೆ ಬಾಯನನ್ನ ಕೈಗೆ ತರುತ್ತಿದ್ದ.ಅದ್ಯಾರೋ ಹೆಣ್ಣುಮಗಳು "ಮೂಸಪ್ಪ!!, ಅಯ್ಯ! ತಗಂಡು ಮೂಸು, ನಿಂಬೆ ಹಣ್ಣು, ಇಗಾ" ಅಂದಳು. ಈ ಹುಡುಗ ಅವಳನ್ನೊಮ್ಮೆ ನೋಡಿ , ನನ್ನ ಒಮ್ಮೆ ನೋಡಿ ಸುಮ್ಮನಾದ.ತನ್ನ ಸಲಹೆ ನಿರಾಕರಿಸಿದನ್ನ ಕಂಡು ಸಹಿಸಲಾರದೆ ಅವಳು," ಹಿಡ್ಕೊಳಯ್ಯ, ಕೊಡು ಮಗೀಗೆ" ಅಂದು ನಿಂಬೆಹಣ್ಣನ ನನ್ನ ಕೈ ಗೆ ಅದುಮಿದಳು.ನಾನೋ ಜನ ಸಂದಣಿಯಲ್ಲಿ ಅವಳ ತಾಯಿಯನ್ನ ಹುಡುಕುತ್ತಿದ್ದೆ.
ಆ ತಾಯಿ ಎಲ್ಲಿದಳೋ, ಅಂತೂ ಬಂದು ಆ ಹುಡುಗನನ್ನ  ಬಸ್ ಬಾಗಿಲಬಳಿ ನಿಲ್ಲಿಸಿದಳು.ಆ ತಾಯಿಗೂ ಮಗನ ವಾಂತಿ ನೋಡುವ ಉಮೇದು ಇಲ್ಲದೆ, ಒಂದು ಕೈಯಲ್ಲಿ ಹುಡುಗನ ಕೈ ಹಿಡಿದು "ಕೊರ್ಲ ಕೆಳಕ್ಕೆ, ಮೆಟ್ಲು ಮ್ಯಾಕೆ ಕೂರು, ಗಾಳಿಗೆ ವಾಂತಿ ಹೊಕತ್ತೆ" ಅಂದ್ಲು, ಹುಡುಗನ ಮತ್ತೊಂದು ಕೈ ನನ್ನ ಮುಂದಿನ ಕಂಬಿ ಹಿಡಿದಿತ್ತು. ಬಸ್ ಬಾಗಿಲಿನಿಂದ ರಭಸವಾಗಿ ಬೀಸೋ ಗಾಳಿ, ಹಿಂದಕ್ಕೆ ಚಲಿಸೋ ಇತರೆ  ವಾಹನಗಳು, ಸರಕ್ಕನೆ ಹಾದು ಹೋಗುವ ಮರಗಳು, ಇದೆಲ್ಲದರ ಕೃಪಾಕಟಾಕ್ಷದಿಂದ ಹುಡುಗನ ಹೊಟ್ಟೆಯ ಕಟ್ಟೆ ಮೀರಿ ತೀರ್ಥಉಧ್ಭವವಾಗಿ ಹೊರ ಓಡಿ ಬಂತು.ಹೊಟ್ಟೆಯ ಮಾಂಸಖಂಡ, ನರವೆಲ್ಲ ಉಬ್ಬಿ ದೊಡ್ಡ ಅಶ್ವಶಕ್ತಿಯ ಮೋಟಾರಿನಂತೆ ಅಕ್ಕಿ ಬಸೆದ ನೀರು ಅವನ ಬಾಯಿಂದ ಬುಳಕ್ಕನೆ ಹಾರಿ ಬಂತು.ನಾನೋ, ಈ ಸಹಿಸಲಸಾಧ್ಯ ದೃಶ್ಯದಿಂದ ಹೊರಓಡಲೆಂಬಂತೆ, ಸೀಟಿನಿಂದ ನೆಗೆವ ಹೊತ್ತಿಗೆ, ಆ ಹುಡುಗ ಹಿಡಿದ ಕಂಬಿಯ ಹಿಡಿತ ಸಡಿಲವಾಗಿ ಆತ ನೇರ ನನ್ನ ಕೈಯನ್ನೇ ಹಿಡಿದ!.ನನ್ನ ಕೈಯನ್ನು ಉಡು ಹಿಡಿದಂತೆ ಅದುಮುತ್ತ "ಊವ್ಯಾಕ್, ಊಫ್, ಆಅಹ್, ಆ" ಅನ್ನಲು ಶುರುವಿಟ್ಟ.ಈ ಅಸಹ್ಯದ ಪರಮಾವಧಿಯನ್ನ ಕಂಡ ನನ್ನ ಸುನೇತ್ರಗಳು ಮುಖವನ್ನ ಹಿಂಡಲು ಪ್ರೇರೇಪಿಸುತ್ತಿದವು.
ಬೆಳ್ಳಂಬೆಳಗ್ಗೆ ಅದೇನು ತಿಂದನೋ, ರಾತ್ರಿ ಅದೇನು ಉಂಡನೋ ಎಲ್ಲವೂ ಕಣ್ಣ ಮುಂದೆ ಹಾದು ಹೋದವು. ಕರಿಬೇವು, ಸಾಸಿವೆ,ಟೊಮೇಟೊ ಸಿಪ್ಪೆ,ಅನ್ನದ ಅಗುಳು, ಲೀಟರ್ಗಟ್ಟಲೆ ನೀರು,ಇಂಗಿನಂತಹ ಕಮ್ಮಟು ವಾಸನೆ, ನರಕದರ್ಶನ ಕ್ಷಣದಲ್ಲೇ ಆಗಿಬಿಟ್ಟಿತ್ತು.ಹಲವರು ಮುಖವನ್ನ ಕೈಗೆ ಹಿಡಿದು "ಥೂ!, ಏನು ಅಸಹ್ಯ ರೀ". "ಹೊರಗೆ ಮಾಡ್ಬೇಕಪ್ಪ, ಡೋರ್ ಮೆಟ್ಟಿಲುಮೆಲೆಲ್ಲ ನೋಡು", "ಮಕ್ಕಳಿಗೆ ಹೊರಗೆ ಕರ್ಕೊಂಡ್ ಬರವಾಗ ಹೆಚ್ಚು ತಿನ್ನಿಸ್ಬಾರ್ದು", "ಒಂದು ಪ್ಲಾಸ್ಟಿಕ್ ಕವರ್ ಹಿಡ್ಕೋ ಬರ್ಬೇಕು", "ಎಣ್ಣೆ ಪಧಾರ್ಥ ತಿನ್ನಿಸ್ಬಾರ್ದು ರೀ", "ಮೊದ್ಲೇ ಬಸ್ ರಶ್, ಯಾಕೆ ಹತ್ತಬೇಕು ಅಂತೀನಿ", ಹೀಗೆ ಒಬ್ಬೊಬ್ಬರೂ ತಮ್ಮ ವಿಶ್ಲೇಷಣೆಯಲ್ಲಿ ತೊಡಗಿರಲು, ನಿಂಬೆ ಹಣ್ಣು ಕೊಟ್ಟ ಆ ತಾಯಿ, "ಹೇಳ್ದೆ ಮೂಸಪ್ಪ ಅಂತ, ಮಖ ನೋಡ್ತವೆ ಎಳ್ದೂ!" ಅಂತ ನನ್ನನ್ನೇ ದುರುಗುಟ್ಟಿ ನೋಡಿತು.
ಬಸ್ಸಿನ ಕ್ಲೀನರ್ ಮರಳಿನ ರಾಶಿ ಇದ್ದ ಸ್ಥಳ ಕಂಡು, ಬಸ್ ನಿಲ್ಲಿಸಿ, ಆ ಕರ್ಮದ ಮೇಲ್ಗಡೆ ಒಂದು ಹಿಡಿ ಸುರಿದ.ಅಪ್ರಯತ್ನಪೂರ್ವಕವಾಗಿಯಾದರು ಜನರ ಕಣ್ಣು ಆ ಮರಳ ರಾಶಿಯ ಮೇಲೆ ಬೀಳುತಿತ್ತು.ವಾಂತಿ ಮಾಡಿ ಸುಸ್ತಾದ ಹುಡುಗನಿಗೆ, ಮಾಡಿಸಲು ನೆರವಾದ ತಾಯಿಗೆ ಬಹುಮಾನವಾಗಿ ನನ್ನ ಸೀಟ್ ಬಿಟ್ಟು ಕೊಟ್ಟೆ,ಹುಡುಗ ಆ ತಾಯಿಗೆ ಒರಗಿ ಹಾಗೆಯೇ ಮಲಗಿದ.ಅವನ ಮುಖ ಮುದ್ರೆ ಕಂಡವರೆಲ್ಲ ಈಗ "ಪಾಪ, ಸುತ್ತಾಗಿರ್ಬೇಕು" ಅಂತ ವಿಷಾದ ವ್ಯಕ್ತಪಡಿಸಿದರು.ಆದರೂ ಆ ಮರಳ ರಾಶಿಯನ್ನ ಕ್ಷಮಿಸುವ ಉದಾರತೆ ಯಾರಲ್ಲೂ ಇರಲಿಲ್ಲ. ಅಂತೂ ಶಿವಮೊಗ್ಗ ಸಮೀಪಿಸುತ್ತಲೇ ಎಲ್ಲಾ ತಮ್ಮ ಬಟ್ಟೆ ಸರಿ ಪಡಿಸಿಕೊಂಡು, ಸಮಯವನ್ನೊಮ್ಮೆ ಅಪ್ರಜ್ಞಾಪೂರ್ವಕವಾಗಿ ನೋಡಿ, ತಲೆ ಕೂದಲನ್ನ ಕೈಯಲ್ಲೇ ಸರಿಪಡಿಸಿ, ಮೈ ಕೊಡವಿ,ಮುಖವನ್ನೊಮ್ಮೆ ಕೈಯಲ್ಲೋ, ಕರ್ಚೀಫಿನಲ್ಲೂ ಒರೆಸುತ್ತಾ, ಬಸ್ ನ ಬಾಗಿಲ ಬಳಿ ಬರತೊಡಗಿದರು.ಫಕ್ಕನೆ ಮರಳ ರಾಶಿ ಇಂದ ಸಣ್ಣಗೆ ಇಣುಕುತಿದ್ದ ವಾಂತಿಯನ್ನ ಕಂಡದ್ದೇ "ಥೂ" ಎನ್ನುತ್ತಾ ಬುಸ್ಸಿನಿಂದಿಳಿದು ನೆಲಕ್ಕೆ ತುಪ್ಪುತಿದ್ದರು. ನಾನು ಅವರಂತೆಯೇ ನೆಲಕ್ಕೆ ಉಗಿದು, ಬಸ್ಸಿಂದ ಹೊರಕ್ಕೆ ಬಂದು ನಿಂತೆ.ಹಿಂದಿನಿಂದ ಬಂದ ಕೈಯೊಂದು ನನ್ನ ಬಲ ಹಸ್ತದಿಂದ ನಿಂಬೆಹಣ್ಣನ್ನ ಕಸಿದು ಹೋಯ್ತು "ಮೂಸು ಅಂದ್ರೆ ಮುಖ ನೋಡ್ತವೆ ...ಮೂದೇವಿಗಳು", ದ್ವನಿ ಮಾತ್ರ ಕೇಳಿತು.
6
Reading under T&C