Kannada · Fiction

ಕಲ್ಲಗಂಬ

Writer DP! Preetham Pais 09 Feb 17 32 Views
"ಏನೋ ಇದು ಮಿಲ್ಟ್ರಿ! ಬಾನೆಟ್ ಜಜ್ಜಿ ಹೋಗಿದೆ, ಎಲ್ಲಿ ಹೊಡುದ್ಯೋ?", ನನ್ನ ಮಿತ್ರನ ಕಾರ್ ಕಂಡು ಹೇಳಿದೆ."ಅದನ್ಯಾಕೆ ಕೇಳ್ತಿಯಾ ಬಿಡು!", ಅಂದ ಅವ. 'ಅದನ್ಯಾಕೆ ಕೇಳ್ತಿಯಾ' ಅನ್ನುವುದರ ಮೂರ್ತ ರೂಪ 'ನಾ ಹೇಳದೆ ಬಿಡೋಲ್ಲ' ಅಂತ ತಿಳಿದಿದ್ದ ನಾನು, ಅವನ ಕಥೆಗೆ ಕಿವಿಯಾನಿಸಿದೆ.ಪಾತ್ರದಾರಿಯ ಪರಿಚಯವಾಗದೆ ಕಥೆಹೇಳುವುದೆಂತು? ಇವನ ಜನ್ಮತಃ ಹೆಸರು ಸುಮಂತ್, ಇವರಪ್ಪ ಮಿಲಿಟ್ರಿ ಹೋಟೆಲ್ ಇಟ್ಟಿದ್ದರಿಂದ, ಇವನ ಹೆಸರು 'ಮಿಲ್ಟ್ರಿ' ಅಂತಲೇ ಊರಿಗೆಲ್ಲ ಗೊತ್ತಿರೋದು. ಈ ಮಿಲ್ಟ್ರಿ ಶಬ್ದ ಉಚ್ಛರಿಸ್ತಾ ಅದಕ್ಕೆ ಇನ್ನಿಲ್ಲದ ಅರ್ಥ ತಂದು ಕರೆವುದು ನಮ್ಮೆಲ್ಲರ ಔದಾರ್ಯದ ಗುಣ!. ಸರಿ! ಕಥೆ ಕೇಳೋಣ.


ಈಗ್ಗೆ ಸುಮಾರು ಆರೇಳು ವರುಷದ ಹಿಂದಿರಬೇಕು. ಚನ್ನಗಿರಿಯಾದ್ಯಂತ ವಿಪರೀತ ಗಾಳಿ-ಮಳೆಯ ದರ್ಶನವಾಗಿತ್ತು.ಸುತ್ತಲ ಹಳ್ಳಿಯಲ್ಲಿ ಬೆಳೆದ ಮೆಕ್ಕೆಜೋಳ, ಬಾಳೆದಿಂಡುಗಳು ನೆಲಕ್ಕುರುಳ್ಳಿದ್ದವು. ಚನ್ನಗಿರಿಯಿಂದ ಚಿತ್ರದುರ್ಗದ ಕಡೆ ಒಂದೈದು ಕಿಲೋಮೀಟರು ಹೋದರೆ ಸಿಗುವ ಮೊದಲ ಹಳ್ಳಿಯೇ 'ಚಿಕ್ಕನಾಯ್ಕನ ಹಳ್ಳಿ'. ಈಚೆಗೆ ಒಂದಷ್ಟು ಓದಿಕೊಂಡಿದ್ದ ಹೊಸ ಪೀಳಿಗೆ ತಮ್ಮ ಊರ ಹೆಸರು ಹಳೆಯಕಾಲದ್ದೆಂದು,  ಅದನ್ನ ತಾವೇ C N ಹಳ್ಳಿ ಅಂತ ನಾಮಕರಣ ಮಾಡಿ, ಚಾಲ್ತಿಗೂ ತಂದಿದ್ದರು. ಸುತ್ತಲೆಲ್ಲ ಬೀಸಿದ ಸುಳಿಗಾಳಿ ಈ ಹಳ್ಳಿಗೂ ಸೋಂಕಿ, ಊರಾಚೆಯ ಸಾಕಷ್ಟು ಹಳೆಯದಾದ ಎಲೆಕ್ಟ್ರಿಕ್ ಕಂಬಒಂದನ್ನ ಕೆಡವಿ ಹಾಕಿತ್ತು. ಇತ್ತೀಚೆಗಿನ ಕಂಬಗಳಂತೆ ಕಾಂಕ್ರೀಟ್, ಕಬ್ಬಿಣದ್ದಲ್ಲ ಅದು. ಚಿಕ್ಕನಾಯ್ಕನ ಕಾಲಕ್ಕೇ ಸೇರುವಂತಿದ್ದ  8-10 ಅಡಿಯ ಚಪ್ಪಡಿ ಕಲ್ಲಿನ ಕಂಬವದು.ನೆಲಕ್ಕೆ ಬಿಗಿಯಾಗಿ ಹುಗಿದಿದ್ದ ಅದು, ನೆಲದಿಂದ ಐದಾರು ಅಡಿ ಎತ್ತರದಲ್ಲಿ ಅರ್ಧಕ್ಕೆ ಮುರಿದು ಬಿದ್ದಿತ್ತು. ಇಲಾಖೆಯವರು ವಾರ ಕಳೆದು ಹೊಸ ಕಂಬವೊಂದನ್ನ ಅದರ ಬಳಿಯೇ ನೆಟ್ಟು, ಮುರಿದ ಕಂಬದ ಅವಶೇಷದ ಮೇಲೆ ಮನಸ್ಸಾಗದೆ ಅದನ್ನ ಅಲ್ಲಿಯೇ ಬಿಟ್ಟು, ತುಂಡಾಗಿ ಬಿದ್ದಿದ ಚೂರನ್ನ ಹೊತ್ತೊಯ್ದರು.
ಸಮಯ ಕಳೆದಂತೆ ಊರ ಜನ ಈ ಕಂಬದ ಸದುಪಯೋಗ ಪಡಿಸಲು ತೀರ್ಮಾನಿಸಿ, ತಮ್ಮ ಬಿಡುವಿನ ವೇಳೆಯನ್ನ ಈ ಕಂಬದ ಸುತ್ತಲೂ ಕಳೆಯತೊಡಗಿದರು. ಬೆನ್ನು ತುರಿಕೆಗೆ ಅತ್ಯುತ್ತಮ್ಮ ಸಾಧನವೊಂದು ಸಿಕ್ಕಿದಂತಾಗಿ, ಜನವೆಲ್ಲ ಈ ಕಂಬಕ್ಕೆ ಒರಗಿ ತಮ್ಮ ಬೆನ್ನು, ಮೈ-ಕೈ , ಇನ್ನೇನೇನೋ ಅದಕ್ಕೆ ಉಜ್ಜುತ್ತಾ ತಮ್ಮ ತೃಷೆ ತೀರಿಸ ಹತ್ತಿದರು. ಮನುಷ್ಯರ ಈ ಅತಿಮಾನುಷ ವ್ಯವಸ್ಥೆಯಿಂದ ಪ್ರೇರಿತವಾದ ಆ ಹಳ್ಳಿಯ ನಾಯಿ, ಬೀಡಾಡಿ ಹಂದಿ, ಹಸುಗಳು ಊರವರನ್ನೇ ಹೋಲುವಂತೆ ಈ ಕಂಬಕ್ಕೆ ಮುತ್ತುತಿದ್ದವು. ಹೀಗೆ ಬಹು ಉಪಯೋಗಿಯಾಗಿ ಮಾರ್ಪಟ್ಟ ಈ ಕಂಬ ನಿಧಾನಕ್ಕೆ ಒಂದು ವಿಳಾಸವಾಗಿ ಪರಿವರ್ತಿತವಾಯ್ತು. ಕಾಲಕ್ರಮೇಣ ಊರವರೆಲ್ಲ ಸೇರುವ ಸ್ಥಳವಾದ ಇಲ್ಲಿ  ಒಂದು ಸಣ್ಣ ಗೂಡಂಗಡಿ ತಲೆಯೆತ್ತಿ, ಬೀಡಿ,ಗುಟ್ಕಾ, ಬೋಟಿ ,ಸೋಪು, ಅನಾಸಿನ್ ಎಲ್ಲದಕ್ಕೂ ಜನ ಇಲ್ಲಿ ಎಡತಾಕುವಂತಾಯ್ತು. ಕಾಲಾಂತರದಲ್ಲಿ, ಜನ ಈ ಕಂಬಕ್ಕೆ ಕುಂಡೆಯಾನಿಸಿ ಒರಗಿದ್ದಕ್ಕೋ, ಇವರ ಅಸಂತೃಪ್ತ ತುರಿಕೆಗೋ, ಅದರ ಕಾಲಬುಡ ಉಗಿದ ಗುಟ್ಕಾ ಇನ್ನಿತರ ಕಸಕ್ಕೋ ಅಂಜಿ, ಕಲ್ಲಗಂಬ ದಿನೇ-ದಿನೇ 'leaning tower of pisa ' ರೀತಿ  ನೆಲಕ್ಕೆ ವಾಲಹತ್ತಿತ್ತು.


ಇದೇ ಹಳ್ಳಿಗೆ ಹೋಗಿದ್ದ ಮಿಲ್ಟ್ರಿ, ಕಾರ್ ನ್ನ ,ಈ ಕಲ್ಲಗಂಬದ ಬಳಿಯೇ ನಿಲ್ಲಿಸಿದ . ಊರವರ ಸಕಲ ಚರ್ಮವ್ಯಾಧಿಯನ್ನ ಕಂಡಿದ್ದ ಈ ಕಂಬ ತನ್ನ ದುರವಸ್ಥೆ ನೆನೆಯುತ್ತ, ಈ ಹಿಂದೆ ತನಗಿದ್ದ ಗಥವೈಭವ ಸ್ಮರಿಸುತ್ತ, ತನ್ನ ಕೊನೆಗಾಲ ಸಮೀಪಿಸಿರೆ..... ತನ್ನ ಮುಂದೆ ಚೆಲುವಾಗಿ ಕಂಡ ಕಾರ್ ನ  ಬಾನೆಟ್ ಜಜ್ಜಿಹೋಗುವಂತೆ ಧೊಪ್ಪನೆ ಬಿದ್ದಿತು.ಅದೇನು ಶಬ್ದವೆಂದು ಔಹಾರಿದ ಜನ ಇವನ ಕಾರ್ ನ ದುರವಸ್ಥೆ  ಲೆಕ್ಕಿಸದೆ "ಯಾವ್ ಬೋಳಿಮಗ ನಿಲ್ಸಿ ಹೋದ್ನೋ ಇದನ್ನ" ಅಂತ ಕಿರುಚಿದ್ರು. ಕಾರ್ ನ ಬಳಿ ನಿಂತ ಜನ ಕಂಡ ಇವ ಗಾಬರಿಇಂದ ಓಡೋಡಿ ಬಂದ. ಊರ ಜನ ಇವನ  ತಂದೆ-ತಾಯಿ, ಅಜ್ಜ-ಅಜ್ಜಿ ಎಲ್ಲರನ್ನು ಕರೆಯುತ್ತ ಬಾಯಿಗೆ ಸಿಕ್ಕಂತೆ ಬೈದು, 'ಇವನ  ಹಲ್ಕಟ್ ಕಾರ್ ತಾಕಿ ಕಂಬ ಬಿತ್ತೆಂದೂ ,ಊರಲ್ಲಿ ಇನ್ನುಮುಂದೆ ಈ ಕಾರ್ ಕಂಡ್ರೆ ಸುಟ್ಟೇ ಬಿಡುವ' ಬೆದರಿಕೆ ಹಾಕಿ, ಪ್ರಾಣ ಸಮೇತ ವಾಪಸು ಕಳಿಸಿದರು. ಅನಿರ್ದಿಷ್ಟಾವಧಿಗೆ ಊರಲ್ಲಿ ನೀರವ ಮೌನ ಆವರಿಸಿತ್ತು.


"ಅಲ್ವೋ! ನಾಲ್ಕಾಣೆ ಕಂಬಕ್ಕೆ, ನಾನು 30,000 ಖರ್ಚು ಮಾಡಬೇಕೀಗ, ಇನ್ನು ಆ ಊರಿನ ಕಡೆ ತಲೆ ಹಾಕಲ್ಲ, ಅದೇನು ತಲೆಕೆಟ್ಟ ಜನ!" ಅಂದ ಮಿಲ್ಟ್ರಿ. ಇವನ ಸೊಡ್ದು, ಕಾರ್ ನ ಅವಸ್ಥೆ ಕಂಡ ನಾನು ಅಭ್ಯಾಸದಂತೆ ಕೈಯನ್ನ ಶರ್ಟ್ ಒಳಗೆ ಸೇರಿಸಿ ಬೆನ್ನು ತೂರಿಸ್ತಾ "ಹೋಗ್ಲಿ ಬಿಡೋ ಇವಾಗ..." ಆಂದೆ!
1
Reading under T&C