Kannada · Fiction

ರಾಣಿ ಪಾಡು

Writer DP! Preetham Pais 31 Dec 16 41 Views
"ಬಯ್ಯ... ಥುತ್! ಇಸ್ಕಿ ಮಾಕಿ ಗಾಡಿವಾಲ,ಕುತ್ತೆಕೆ ಊಪರಿಚ್ ಚಧಾಕು ಗಯಾ ದೇಖ್"  ಬಾಬ್ಜಾನ್ (ಬಾಬ್ ಜಾನ್) ನನ್ನ ಮಾಮನಿಗೆ ಬಂದು ಕೂಗಿದ. ನನ್ನ ಅತ್ತೆ ಮನೆ ಲಕ್ಕವಳ್ಳಿಯಲ್ಲಿದೆ. ಅವರದ್ದೊಂದು ಸೈಕಲ್ ಶಾಪ್, ಅಲ್ಲಿ ಕೆಲಸಕ್ಕಿರುವವನೇ  ಈ ಬಾಬ್ಜಾನ್. ಹೆಚ್ಚು ಕಡಿಮೆ ಸಕಲ ಕಾರ್ಯಪಾರಂಗತ ಅನ್ನಬಹುದು.ಅತ್ತಕಡೆ ಮುಸ್ಲಿಂ ಅಲ್ಲದ, ಇತ್ತಕಡೆ ಕ್ರಿಶ್ಚಿಯನ್ ಅಲ್ಲದ ಇವನ ಹೆಸರೇ ಒಂದು ರಹಸ್ಯ .ಇವನ ಬೊಬ್ಬೆಗೆ ಮನೆಮಂದಿಯೆಲ್ಲ ಹೊರಬಂದು ನೋಡಿದ್ವಿ. ಬೆಳ್ಳನ್ನ ಪೊಮೇರಿಯನ್ ನಾಯಿ ಅದು. ನಮ್ಮ ಎದುರು ಮನೆಯಿಂದ ಸ್ವಲ್ಪ ಬಲಕ್ಕೆ ಅದರ ಮನೆ.ಅದು ಗಂಡು ನಾಯಿಯಾಗಿದ್ದರು ಅದರ ಯಾವ ಬಾಲವನ್ನೂ ಲೆಕ್ಕಿಸದೆ ಅದನ್ನ 'ರಾಣಿ' ಅಂತಲೇ ಮನೆಯವರೆಲ್ಲ  ಕರೆಯೋದು.ಪೆಕ್, ಪೆಕ್ ,ಪೆಕ್ ಅಂತ ಅದು ಬೊಗಳುತಿದ್ದರೆ ಬೆಕ್ಕುಗಳೂ, 'ಹೋಗಲೇ ' ಎಂಬಂತೆ ಕೆಕ್ಕರಿಸಿ  ಆಚೆ ಬಳಸಿ ಹೋಗುತ್ತಿದ್ದವು. ಹೀಗಿದ್ದರೂ ಅದರ ಹಳದಿ ಪಾಚಿಕಟ್ಟಿದ ಹಲ್ಲು ಸೋಂಕಿ ಇಂಜೆಕ್ಷನ್ ಹಾಕಿಸೋ ಪ್ರಸಂಗ ತಪ್ಪಿಸಲು ಜನಗಳು ಅಲ್ಪ ಸ್ವಲ್ಪ ಹೆದರುತ್ತಿದ್ದರು.

ಈಗ ನೋಡಿದರೆ  ಈ ರಾಣಿಯ ಬಿಳಿ ತುಪ್ಪಟವೆಲ್ಲ ರಕ್ತಮಯ.ಅದರ ಮೈಯಿಂದ ಹೊರಟ ನೆತ್ತರು ಇಡೀ ಡಾಂಬರು ರಸ್ಥೆಯನ್ನೆಲ್ಲ ಕಡುಕೆಂಪಾಗಿಸುವ  ದೀಕ್ಷೆ ತೊಟ್ಟು ಓಡುತಿತ್ತು.ಅದರ ಹೊಟ್ಟೆ-ತಲೆಯ ಮೇಲೆಲ್ಲಾ ಆ ರಕ್ತದಾಹಿ ವಾಹನದ ಚಕ್ರಗಳು ಸಿಡಿದು ಓಡಿದ್ದವು. ನಾವು ಹೋಗಿ ನೋಡುವ ಕಾಲಕ್ಕೆ ಅದರ ಹೊಟ್ಟೆಯ ತಳದಿಂದ ಕಪ್ಪು,ಕೆಂಪು,ನೀಲಿ ಮಿಶ್ರಿತ ಎಂಥದ್ದೋ ಒಂದು ಹೊರಸೂಸುತಿತ್ತು. ದಪ್ಪಗಾದ ಮೊಡವೆಯನ್ನ ಹಿಂಡಿದಾಗ ಪಿಚಕಾರಿಯಂತೆ ಸಿಡಿವ ಕೀವಿನಂತೆ ಅದರ ನೆತ್ತಿ ಒಡೆದು ಮಿದುಳು ಹಳದಿ ಕಫ ಉಗಿದಂತೆ ಅಲ್ಲೆಲ್ಲ ಹರಡಿತ್ತು.ಭೀಕರ, ಭೀಭತ್ಸ ಇನ್ಯಾವ ಪದಗಳಿಗೂ ದಕ್ಕದ ಸಾವು ಅದು.ಯಾವ ನಾಯಿಗೂ ಇಂಥ ಸಾವು ಬರಬಾರದು ಅಂತ ಎಲ್ಲರಿಗೂ ಒಮ್ಮನಿಸ್ಸಿನಿಂದ ಅನ್ನಿಸಿತ್ತು.
ಜನ ನಿಧಾನಕ್ಕೆ ಆ ಶವದ ಮುಂದೆ ಒಟ್ಟಾದರು.ಶವ ಅನ್ನೋದು ಮನುಷ್ಯ ಮೃತನಾದರೆ ಮಾತ್ರ ಅಲ್ವೇ? ಶತ್ರು ಸತ್ತರೆ ನೆಗೆದುಬಿದ್ದ ಅಂತೀವಿ, ಅಷ್ಟು ಬೇಕಿಲ್ಲದ ನೆಂಟ ಸತ್ತರೆ ಹೋದ ಅಂತೀವಿ,ಮಿತ್ರ ಸತ್ತರೆ ತೀರಿಕೊಂಡ ಅಂತೀವಿ, ಗಣ್ಯರು ಸತ್ತರೆ ನಮನ್ನಗಲಿದರು ಅಂತೀವಿ. ಅಷ್ಟಕ್ಕೂ ಇದೊಂದು ನಾಯಿ, ಹಾಗಿದ್ದಮೇಲೆ ಇದು ಹೆಣ. ಸರಿ ಈ ವಿಕಾರವನ್ನೆಲ್ಲ ನೋಡಿದ್ದೇ ಒಂದಿಬ್ಬರು ಸರಸರನೆ ಬೈಕ್ ಹತ್ತಿ ಆ ವಾಹನದ ಪೂರ್ವಾಪರ ಗ್ರಹಿಸಿ ಅದರ ದಿಕ್ಕಿಗೆ ಬರರೂ.... ಅಂತ ಹೊರಟರು. "ಹೇ, ನಾನು ನೋಡ್ದೆ ಕಣ್ರೀ ಅದನ್ನ!, ಓಮ್ನಿ ಕಣ್ರೀ ಅದು.ನಾವೆಲ್ಲ ಕೂಗಿದ್ರು ನಿಲ್ಲಿಸದೆ ಹೆಂಗ್ ಹೋದ ಗೊತ್ತಾ  ಆ ಹಲ್ಕಾನನ್ನ ಮಗ " ಪ್ರತ್ಯಕ್ಷದರ್ಶಿಯಾಗಿದ್ದ ಭಾಸ್ಕರಶೆಟ್ರು ಬಾಯಿ ಬಿಟ್ರು. "ಹೇ, ಭರ್ತಿ ಜೋರಾಗೇ ಬಂದ ಬಿಡ್ರೀ ಆವಾ, ದಯ್ಯದ್ ಗಾಳಿ ಬೀಸದಾಂಗೆ ಬಂದು ಹೋದ ಅಂತೀನಿ, ವಿಲೇಜ್ ಅಕೌಂಟೆಂಟ್ ಅವರ್ದು ನಾಯಿ, ತಿಳಿಸೋಕೆ ಹೇಳಿದೀನಿ ಅವ್ರ್ ಮನೆವರಿಗೆ ".  ಇವರ ಬಿಳಿ, ಹಳದಿ, ಕೆಂಪು ಇನ್ಯಾವುದೆಲ್ಲ ಬಣ್ಣದ  ಕಾರ್ಡುಗಳಿಗೆ, ಪಹಣಿ,ಪತ್ರ, ಜಾಮೀನು ಸರ್ವೇ, ಆದಾಯ, ಜಾತಿ ಪತ್ರಕೆಲ್ಲ ಬೇಕಾಗಿದ್ದ ಈ ವಿಲೇಜ್ ಅಕೌಂಟೆಂಟ್. ಇವನಿಗೆ ಐವತ್ತೋ, ನೂರೋ  ಕೊಟ್ಟು ಕೆಲಸ ಸಾಗಿಸುವ ಇವರೆಲ್ಲ, ಅವನ ನಾಯಿ ಸತ್ತಾಗ ತಾವು ಕರುಣೆ ತೋರ ಬೇಕಾದ್ದು ಕರ್ತವ್ಯವೆಂದೇ ಭಾವಿಸಿದರು.
 "ಅಲ್ರೀ ಶೆಟ್ಟರೇ, ಗಾಡಿ ನೋಡಿದ್ರಲ್ಲಾ, ನಂಬರ್ ಕಂಡ್ರಾ?"  " ಇಲ್ವೋ ಮಾರಾಯ, ಅದೇನೋ ಕೆ.ಎ ಅಂತಾ... ನೋಡ್ದೆ" "ಹೋ ಹೌದಾ, ಕೆ. ಎ ನಾ, ಹಂಗಾರೆ... ಕರ್ನಾಟಕದ್ದೇ ಬಿಡಿ". ಓಮ್ನಿ ಅಖಂಡ ಭಾರತದ್ದಲ್ಲ,ನಮ್ಮ ರಾಜ್ಯಕ್ಕೆ ಸೇರಿದ್ದೇ ಅಂತ ತಿಳಿದದ್ದು ಇವರ ತನಿಖೆಯನ್ನ ಇನ್ನಷ್ಟು ಚುರುಕುಗೊಳಿಸಿತು.ಕೆ.ಎ ಎನ್ನುವ ಎರಡಕ್ಷರದಿಂದ ಇವರು ಏನೆಲ್ಲ ರಹಸ್ಯ ಬೇಧಿಸ್ತಾರೋ ನೋಡುವ ಕುತೂಹಲಕ್ಕೆ ಮಣಿದು ಅಲ್ಲಿಯೇ ನಿಂತಿದ್ದೆ. "ಕೆ.ಎ ಅಂತಿದ್ಮೇಲೆ ನಮ್ಮ ಶಿವಮೊಗ್ಗದ್ದೋ, ಇಲ್ಲ ಚಿಕ್ಕಮಗಳೂರಿನದೋ ಇರಬೇಕು". ಕೇವಲ ಕೆ.ಎ ಗೆ ಈಗ ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಸರ್ವ ಒಮ್ನಿಗಳು ಕೊಲೆಗಡುಕಗಳಾಗಿ ಕಂಡವು. "ಶೆಟ್ರೇ, ಕೆ.ಎ ೧೪ ಅಂತಲೋ, ಕೆ.ಎ ೧೮ ಅಂತೇನಾದ್ರೂ ಕಂಡ್ರಾ?" "ಹಾ... ಅಲ್ಲ ಅದು ಕೆ.ಎ ಅಂತ. ಹು!, ಅದೇನೋ ಎಂ ತರಹಾ... ಇರ್ಬೇಕು ಎಂ!!. ಹುನ್ರೀ ಎಂ ತರಹ ಏನೋ ಕಂಡಂಗೆ..." ಕೆ.ಎ ಎಂಬ ಎರಡು ಅಕ್ಷರವೇ ಮಿದುಳು ತಿನ್ನೋವಾಗ, ಈ ಶೆಟ್ರು ಎಂ ಬೇರೆ ಸೇರಿಸಿ ಗೊಂದಲ ಹೆಚ್ಚಿಸಿದ್ರು. "ಹೋ, ಎಂ" , "ಆಹಾ ಕೆ.ಎ ಎಂ ". ಜನವೆಲ್ಲ ತಲೆಕೊಡವಿ, ಕೂದಲು ಕೆರೆದು ಎಂದೂ ನೆನಪಿಗೆ ಬಾರದ ಏನನ್ನೋ ನೆನಪು ಮಾಡಹತ್ತಿದರು.
ಅಷ್ಟರಲ್ಲೇ, ಬೈಕು ಹತ್ತಿ ಹೋದವರಿಬ್ಬರು ಒಬ್ಬರ ಹಿಂದೆ ಒಬ್ಬರು ಬಂದರು. ಹೋದ ವೇಗ ಬರುವಲ್ಲಿ ಇಲ್ಲದ್ದನ್ನು  ಕಂಡ ಜನ ನಿರೀಕ್ಷಿಸಿದ್ದನ್ನೇ ಖಾತ್ರಿಪಡಿಸಲೆಂಬಂತೆ " ಎನ್ರೋ ಸಿಗ್ಲಿಲ್ವಾ ಅವ್ನು". "ಸಿಕ್ಲಿಲ್ಲರೀ!, ಆವಾ ಎಲ್ಲಿ ಹಾಳುಬಿದ್ದನೋ, ನಾನು ಬಾವಿಕೆರೆವರೆಗೆ ಹೋದೆ, ಇವ ತರೀಕೆರೆ ದಾರೀಲಿ ಇನ್ನೂ ಮುಂದೆ ಹೋದ್ನಂತೆ, ಯಾವ ಓಮ್ನಿ ನು ಸಿಗ್ಲಿಲ್ಲ".ತಮ್ಮ ಯುವಕರಿಂದ ಕೊಲೆಗಡುಕ ಸಿಗದಿದ್ದು ಅವಮಾನ ಎನಿಸಿದರೂ, ಮಾತು ಮುಂದುವರೆಯಲೆಂಬಂತೆ ಜನ ನಾಯಿ ಬಗ್ಗೆ ಮಾತಾಡಹತ್ತಿದರು. "ಪಾಪದ, ನಾಯಿ ಬಿಡ್ರಿ ಅದು. ಕಂತ್ರಿ ನಾಯಿಗಳ ಜೊತೆ ಸೇರ್ತಾನೆ ಇರ್ಲಿಲ್ಲ"." ಅಯ್ಯೋ ಅದೇನು ಚುರುಕಿತ್ತು, ಈ ವಡೆ ರಾಜಣ್ಣನ ಮನೆ ಹಿಂದೆ ಕಾಯಿ ಮಟ್ಟೆ ಕದೀಲಿಕ್ಕೆ ಕಳ್ಲರು ಬಂದಾಗ, ಚೈನು ಕಿತ್ಕೊಂಡು, ರಾಣಿ ಅವರ ಮುಂದೆ ಬೊಗಳ್ತಾ ಇತ್ತಂತೆ". "ಅದೇನೋ ೩೦೦೦ ಕೊಟ್ಟು ನಾಯಿ ತಂದ್ರಂತೆ ವಿಲೇಜ್ ಅಕೌಂಟಂಟ್"."ಹೌದ, ಏನೋ ಒಳ್ಳೇ ನಾಯಿ ಬಿಡಿ".
ವಿಲೇಜ್ ಅಕೌಂಟೆಂಟ್ ಮನೆಗೆ ವಿಷಯ ತಿಳಿಸಿ ಬರ ಹೋದ ಹುಡುಗ ಓಡೋಡಿ ಬಂದ."ಅವ್ರ್ ಮನೇಲಿ ಯಾರೂ ಇಲ್ಲ, ನಾಳೆ ಬೆಳಗ್ಗೆ ಬರೋದಂತೆ". ಜೋರಾಗೇ ಕೂಗಿ ಹೇಳಿದ. "ಅಯ್ಯೋ ಹೌದಾ?, ಊರಲ್ಲಿ ಇಲ್ಲವಂತ?!?" ಶೆಟ್ರು ಗಾಬರಿ ಬಿದ್ದವರಂತೆ ಕೇಳಿದ್ರು.  "ಅಯ್ಯಾ, ನಮಗ್ಯಾಕ್ರೀ ಈ ಉಸಾಬರಿ, ಬೆಳಗ್ಗೆ ವರೆಗೆ ಈ ಅಸಹ್ಯ ನೋಡೋಕ್ ಆಗತ್ಯೇ, ಶೆಟ್ರೇ ನೋಡಿ, ಏನಾದ್ರು ಮಾಡಿ!" ಇದ್ಯಾಕೋ ತನ್ನ ಎದೆ ಮೇಲೆ ಬರೋದನ್ನ ಗ್ರಹಿಸಿದ ಶೆಟ್ರು, "ಅಲ್ಲರೀ, ಈ ಹಾಳು ನಾಯಿಗೆ ಸರ್ಯಾಗಿ ಚೈನ್ ಹಾಕಿ ಕಟ್ಟೋಕೇನು ಅಂತೀನಿ, ಮೊದಲೇ ಚಳಿಗಾಲ, ಅದ್ಯಾವ ರಂಡೆ ಹಿಂದೆ ಹೋಯ್ತೋ ಇದು, ಸಾಹೇಬ್ರು ಬೇರೆ ಇಲ್ಲ. ಆ ಗ್ರಾಮ ಪಂಚಾಯತ್ ಅಲ್ಲಿ ಬಿದ್ದು ಸಾಯ್ತನಲ್ಲ ಕುಡ್ಕಾ ಲೋಕಿ ಅವ್ನನ್ನ ಕರೆದು ಇದನ್ನ ಸಾಗ್ಸಿ" ಎಂದವರೇ ಓಮ್ನಿಯಂತೆ ತಾವೂ ಕಣ್ಮರೆಯಾದ್ರು. "ಈ ನಾಯಿಗಳು ಬೇರೆ ಈ ಊರಲ್ಲಿ, ಬೀದಿ ನಾಯಿ ಕಡಿಮೆ ಆಗಿದ್ವಂತ ಇವನ್ನ ಬೇರೆ ಸಾಕೋದು, ಶೋಕಿ" ಇನ್ಯಾರೋ ಒಗೆದ. "ನಿಯತ್ತಿಲ್ಲರೀ ಈ ನಾಯಿಗಳಿಗೆ, ಅನ್ನ ಹಾಕಿದವರ ಹಿಂದೆಲ್ಲ ಹೋಗತ್ತೆ". ತಲೆಗೊಂದರಂತೆ ಮಾತುಗಳು.  ಒಂದು ಘಂಟೆಗೂ ಹೆಚ್ಚು ಕಾಲ ಈ ರಾಣಿಯ ಬಗ್ಗೆ ಮೆಚ್ಚುಗೆ ಮಾತಾಡಿದವರೆಲ್ಲ ಈಗ ಇದರ ಚಾರಿತ್ರ್ಯವನ್ನೇ ಪ್ರಶ್ನಿಸತೊಡಗಿದರು. ಡಾಂಬರು ರಸ್ತೆಗೆ ಅಂಟಿದ್ದ ಅದರ ನಾಲಗೆ ಬಿಸಿಲಿಗೆ ಕಪ್ಪಿಟ್ಟು ಹೆನ್ನ್ನೊಣಗಳು ಅದರ ಸುತ್ತ ಗುಯ್ಯ್ ಗುಟ್ಟುತಿದ್ದವು. 


3
Reading under T&C