Kannada · Fiction

ಸ್ತ್ರೀವಾದ

Writer DP! Preetham Pais 24 May 17 53 Views
ಚನ್ನಗಿರಿ ಇಂದ ಚಿಕ್ಕಮಗಳೂರಿಗೆ 100 ಕಿಲೋ ಮೀಟರ್ ಆಸುಪಾಸಿನ ದೂರ. ಆದರೆ ರಸ್ತೆಯ ಸ್ಥಿತಿ ಹೇಳತೀರದು. ನನಗೆ ತಿಳಿದಿರುವಂತೆ ಚನ್ನಗಿರಿ-ಬೀರೂರು ರಸ್ತೆ ಡಾಂಬರು ಕಂಡದ್ದೇ ಕಡಿಮೆ. ಹೀಗಿರೆ ಅಣ್ಣ ಸುಧಾಕರ, ಅತ್ತಿಗೆ, ನಾನು ಟ್ಯಾಕ್ಸಿ ಮಾಡಿ ಚಿಕ್ಕಮಗಳೂರಿಗೆ ಹೋಗುವ ಪ್ರಸಂಗ ಬಂತು. ಭೈರಪ್ಪ ವಯ್ಯಸ್ಸಾದರು ಒಳ್ಳೆಯ ಡ್ರೈವರ್. ಹೀಗೆ ನಾಲ್ಕು ಮಂದಿ ಕಾರು ಹತ್ತಿ ಹೊರಟೆವು.ದಾರಿಗುಂಟ ಮೇಯಲು ಕುರುಕಲು, ಹೊಟ್ಟೆ ಹಿಂಡದಿರಲೆಂದು ನಿಂಬೆಹಣ್ಣು ಇಟ್ಟುಕೊಂಡದ್ದಾಯಿತು.ಬೀರೂರು ಹೋಗುವ ಹಾದಿಯಲ್ಲೇ ಚನ್ನಗಿರಿಯ ಏಕಮಾತ್ರ ಡಿಗ್ರಿ ಕಾಲೇಜು ಒಂದಿದೆ, ಬಸ್ ಸ್ಟಾಪ್ನಿಂದ 1.5 ಕಿಲೋ ಮೀಟರ್ ಇರುವ ಈ ಕಾಲೇಜುಗೆ ಹುಡುಗರೆಲ್ಲ ನಡೆದೇ ಬರುವುದು ರೂಢಿ. ಹೀಗೆ ಒಂದು ವಿದ್ಯಾರ್ಥಿಗಳ ಗುಂಪು ದಾರಿಯಲ್ಲಿ ನಡೆದು ಬಂದಿತ್ತು.

"ಸುಧಾಕರಣ್ಣ, ಅದೇನು ಶೋಕಿ ನೋಡಿ ಇವಗಿನ್ ಮಕ್ಕ್ಳಿಗೆ, ಗಂಡು-ಹೆಣ್ಣು ಅಂತಿಲ್ಲ ಒಟ್ಟಿಗೆ ಊರು ಸುತ್ತುತ್ತವೆ. ಇವೇನು ಓದೋಕೆ ಬರುತ್ವ್ ಅನ್ಕೊಂಡ್ರಾ?" ಭೈರಪ್ಪ ಮಾತು ಶುರುವಿಟ್ಟ.
"ಇವಾಗ ಗಂಡು-ಹೆಣ್ಣು ಭೇದ ಇಲ್ಲ ಭೈರಪ್ಪ, ಎಲ್ಲರೂ ಒಂದೇ ಆಗಿದಾರೆ"
"ಏನ್ ಒಂದೇ ಅಂತೀರೋ, ಒಂದೇ ಅಂತ ನಾವು ಹೆರೋಕೆ ಆಗತ್ಯೇ?"
"ಹೆರೋ ವಿಷ್ಯ ಹೇಳಿದ್ನೇ, ಓದೋ ವಿಷ್ಯ ಹೇಳ್ದೆ"
"ಓದೋ ವಿಷ್ಯ ಹೇಳ್ತಿಲ್ಲ ಯಜಮಾನರೇ, ಓಡಾಡೋ ವಿಷ್ಯ ಹೇಳ್ತಿರೋದು, ನನ್ ಮಗಳು PUC ಮಾಡೀನೇ ಮದ್ವೆ ಆಗಿರೋದು, ಓದೋಕೆ ಯಾವನ್ ಬೇಡ ಅಂತಾನೆ?"
"ಒಟ್ಟಿಗೆ ಓಡಾಡೋದು ತಪ್ಪು ಅಂತೀಯಾ ಅಷ್ಟೇ ಅಲ್ವೇ?, ಹೋಗ್ಲಿ ಬಿಡು"
"ನಿಮಗೆ ಮಾತಿನ ಅರ್ಥ ಆಗಂಗಿಲ್ಲ, ದಾರಿಗುಂಟ ಒಟ್ಗೆ ಹೋಗೋದು ಏನ್ ಇರತ್ತೆ ಇವುಕ್ಕೆ ಅಂತ, ಮೈ ಮೇಲೆ ಜ್ಞಾನ ಇಲ್ದೆ ನಡುರಸ್ತೆ ವರೆಗೂ ಬರ್ತವೆ ನೋಡಿ"
"ನಾನಂತು ಸ್ತ್ರೀವಾದಿ, ಹೆಣ್ಣನ್ನ ಸಮಾನವಾಗಿ ಕಾಣೊವ್ನು, ನಂಗೆ ಈ ವಾದ ಸರಿ ಕಾಣೋಲ್ಲ" ಅಣ್ಣ ಕಡ್ಡಿ ಮುರಿದಂತೆ ಹೇಳಿದ.
"ನೀವೇನ್ ಹೇಳ್ತೀರಿ?" ಅಂತ ಭೈರಪ್ಪ ನನ್ನ ಕಡೆ ದೃಷ್ಟಿ ಹರಿಸಿದ.
"ಅಣ್ಣ ಹೇಳೋದ್ ಸರಿ ಇದೆ ಭೈರಪ್ಪ, ಈ ಕಾಲದಲ್ಲಿ ಹೀಗೆ ಯೋಚಿಸೋದು ತಪ್ಪಾಗುತ್ತೆ"
"ಸರಿ ಹೋಯ್ತು, ಅಣ್ಣ-ತಮ್ಮ ಸರಿ ಇದ್ದೀರಾ" ತನ್ನ ವಾದ ನಿಲ್ಲಿಸಿ ಭೈರಪ್ಪ ಸುಮ್ಮನಾದ.


ಸ್ತ್ರೀವಾದದಿಂದ ಸಂತುಷ್ಟಗೊಂಡ ನನ್ನ ಅತ್ತಿಗೆ ಮಾತಿಗಿಳಿದರು."ಸಧ್ಯ ನೀವಾದರೂ ಹೆಣ್ಣು ಮಕ್ಕಳು ಸರಿ-ಸಮ ಅಂತ ತಿಳ್ಕೊಂಡಿದ್ದೀರಲ್ಲ, ಅಷ್ಟೇ ಸಮಾಧಾನ"
"ಹೌದು ಮತ್ತೆ..., ನೋಡೇ ಶ್ರುತಿ, ನಂಗೆ ಮಗುವಿನ ವಿಷ್ಯಕ್ಕೆ ಬಂದರೂ ಅಷ್ಟೇ, ಹೆಣ್ಣಾದರೂ ಸರಿ ಗಂಡಾದರು ಸರಿ, ನಿನ್ನ ವಿಷ್ಯಕ್ಕೆ ಆದ್ರೂ, ಎಂದಾದರೂ ಭೇದ-ಭಾವ ಮಾಡಿದ್ದುಂಟೇ?"
ಹೊಸದಾಗೆ ಮದುವೆಯಾಗಿದ್ದ ಅತ್ತಿಗೆಗೆ ಅಣ್ಣನ ಈ ನಿಲುವುಗಳಿಂದ ಮನೋಲ್ಲಾಸವಾದದ್ದಂತೂ ಸತ್ಯ. ಅಂತಲೇ, ತಗೋಳ್ರಿ ಕೋಡುಬಳೆ ಇದೆತಿನ್ನಿ ಅಂತ ನಮ್ಮಿಬ್ಬರಿಗೂ ಕೊಟ್ಟರು. ಹೆಣ್ಣು ಮಕ್ಕಳು ಸಂತೃಪ್ತರಾದಾಗ ಮನೆ ಮಂದಿಗೆಲ್ಲ ಹೆಚೆಚ್ಚು ತಿನ್ನುಸುವುದು ವಾಡಿಕೆ.ಎಲ್ಲರೂ ತನ್ನ ವಾದಕ್ಕೆ ವಿರುದ್ಧವೇ ಇರುವುದನ್ನ ಅರಿತ ಭೈರಪ್ಪ ಸುಮ್ಮನಾಗಿ ಕೋಡುಬಳೆ ಮೇಲೆ ದೃಷ್ಟಿ ಹರಿಸಿದ.


"ಈ ಸರಿ ಎಲೆಕ್ಷನ್ ಗೆ ಶಾಂತಮ್ಮ ನಿಂತಿದಾರೆ ಅಲ್ವ ಚಿಕ್ಕಮಗಳೂರಿನಿಂದ ?"
"ಹೌದಣ್ಣ, ಈ ಸರಿ ಅವ್ರೆ ಗೆಲ್ಲುವ ಹಾಗೆ ಕಾಣ್ತಾರೆ"
"ಆವಮ್ಮ ಗೆದ್ರೂ, ಆಡಳಿತ ನಡೆಸೋದು ಅವರ ಗಂಡ"
"ಹಾಗೇನಿಲ್ಲ ಅಣ್ಣ, ನೋಡೋಣ ಗೆದ್ದ ಮೇಲೆ ಗೊತ್ತಾಗೋದು"
"ಗೆಲ್ತಾರೆ, ಆಮೇಲೆ ಎಲ್ಲ ಅವರ ಮಗ, ಗಂಡ, ಅಳಿಯ ನೋಡ್ಕೋತಾರೆ"
"ಹೆಣ್ಣುಮಕ್ಕಳ ಪರ ಇರುವ ನೀವು ಅವ್ರನ್ನ ಬೆಂಬಲಿಸಬೇಕು ರೀ" ಅತ್ತಿಗೆ ನುಡಿದರು.
"ಅವ್ರು ಗೆಲ್ಲೋಕೆ ಏನು, ಒಳ್ಳೇದೇ, ಆದ್ರೆ ಆವಮ್ಮ ಗೆ ಅಧಿಕಾರ ನಡೆಸೋಕು ಬರ್ಬೇಕು ಅಲ್ವ?......." ಮಾತಿನ ಮಧ್ಯೆ ಏನೋ ನೆನಪಾದಂತೆ ಅಣ್ಣ,


"ಥೋ, ಬೆಳಗ್ಗೆನೇ ನೀರು ಕುದಿದ್ದದ್ದು ಹೆಚ್ಚಾಯಿತು, ಭೈರಪ್ಪ ಮುಂದೆ ನಿಲ್ಲಿಸ್ರಿ, ಮರೆ ಇದ್ದಕಡೆ"
"ನಂಗು ಹೋಗ್ಬೇಕಿತ್ತು ನೋಡಿ, ಒಳ್ಳೆದಾಯ್ತು, ನಿಲ್ಲಿಸುವ"
"ಹೋಟೆಲ್ ಇದ್ದ ಕಡೆ ನಿಲ್ಲಿಸಿದ್ರೆ ಆಗ್ತಿತ್ತು" ಅತ್ತಿಗೆ  ಹೇಳಿದರು
"ಹೋಟೆಲ್ ಯಾಕೆ? ಮನೆಗೆ ಹೋಗ್ತೀವಲ್ಲ ಊಟಕ್ಕೆ" ಅಣ್ಣ ಹೇಳಿದ.
"ಅಬ್ಬಾ....., ಸಮಾಧಾನ ಆಯಿತು, ಸೀಗೆರೆಟೆ ಏನಾದ್ರು ಬೇಕಾ ಭೈರಪ್ಪ?"
"ಬೇಡಿ ಸಾರ್, ಇನ್ನೇನು ತಲುಪ್ತಿವಿ"
"ಸರಿ, ನಡೀರಿ ಹಾಗಾದ್ರೆ, ಹೊರಡೋಣ......."
ಹೀಗೆ ಮಾತು ಮುಂದುವರೆದಿರಲು ಕಾರು ಮನೆ ತಲುಪಿಯಾಗಿತ್ತು.


"ಬನ್ನಿ, ಬನ್ನಿ, ಬನ್ನಿ" ಮನೆಯವರೆಲ್ಲ  ಒಳಗೆ ಕರೆದರು.
"ಹೋಗಿ, ನೀವು ಫ್ರೆಶ್ ಆಗಿ ಬನ್ನಿ, ಬಿಸಿನೀರಿದೆ"
ಅಣ್ಣ ಬಾತ್ರೂಮ್ ಒಳಹೊಕ್ಕ, ಅತ್ತಿಗೆ ಮುಖ ಕಿವುಚುತ್ತಾ ನಿಂತದ್ದು ಕಾಣಿಸಿತು.
"ಏನಾಯಿತು" ಅಂದೆ
"ನಿಮ್ಮಣ್ಣ ಹೋದರೆ ಆಚೆ ಬರೋದು ಒಂದು ಗಂಟೆ ಮಾಡ್ತಾರೆ" ಅಂದರವರು
"ಹೂ, ಆವಾ ಹಾಗೆ" ಅಂದೆ ನಾನು.
ಸುಮಾರು ಅರ್ಧ ತಾಸು ಕಳೆದು ಅಣ್ಣ ಆಚೆ ಬಂದ,
"ಹೋಗ್ತೀಯೇನೋ? ನೀರು ಬಿಸಿ ಇದೆ" ನನ್ನ ಕೇಳಿದ.
"ಇಲ್ಲಾ, ಆಮೇಲೆ ಹೋಗ್ತೀನಿ, ಬೇರೆ ಯಾರಾದ್ರೂ ಹೋಗಿ..." ಇಷ್ಟು ಹೇಳಿ ಮುಗಿಸುವ ಕಾಲಕ್ಕೆ ಅತ್ತಿಗೆ ಬಾತ್ರೂಮ್ ಅಗುಳಿ ಹಾಕಿದ ಸದ್ದು ಕೇಳಿಸಿತು.
ಅಣ್ಣ ದಾರಿಯಲ್ಲೇ ನಿಂತ ಮಾತು ಮುಂದುವರೆಸುತ್ತಾ," ನೋಡಿ ನಾನಂತು ಸ್ತ್ರೀವಾದಿ, ಆದರೆ ಈ ಶಾಂತಮ್ಮ ಎಲೆಕ್ಷನ್ ಗೆದ್ದರೆ......."
 
1
Reading under T&C