Kannada · Fiction

ಸುದ್ದಿ

Writer DP! Preetham Pais 23 May 17 32 Views
 -----------------------------------------------------------------      ಕೂಡ್ಲು   ---------------------------------------------------------------------------------
"ಏನೇ, ದಿನ ಹೇಳಿದರೇನು ಡಾಕ್ಟ್ರು"
"ಹೂನವ್ವ, ನಾಡಿದ್ದು 13 ಕ್ಕೆ ಬರೋಕ್ ಹೇಳಿದಾರೆ"
"ಹೋ, ದಿನ ಹತ್ರ ಆಗೇ ಹೋಯ್ತ್ ನೋಡು, ಅರಾಮಿದಿಯಾ ಅಲ್ವೇ?"
"ಹುಂರವ್ವ, ಸ್ವಲ್ಪ ಸುಸ್ತು ಅಷ್ಟೇಯಾ"
ಈಚೆಗೆ ಮಹಾದೇವಿಗೆ ಈ ಸಂಭಾಷಣೆಗಳು ದಿನಚರಿಯಂತಾಗಿದ್ದವು. ಸೊಂಟ ಮುರಿದೇಬಿಡುವಂತಿದ್ದ ಇವಳ ಹೊಟ್ಟೆ ಕಂಡ ಹೆಂಗಸರದ್ದೆಲ್ಲ ಅದೇ ಪ್ರಶ್ನೆ, ಇವಳದ್ದು ಇದೇ ಉತ್ತರ.

ಮಳೆಕಾಡಿನಿಂದಾವೃತವಾದ ಇವಳ ಹಳ್ಳಿ ಕೂಡ್ಲು, ಚಿಕ್ಕಮಗಳೂರಿಗೆ 12 ಕಿಲೋ ಮೀಟರ್ ದೂರ ಶೃಂಗೇರಿ ಹಾದಿಯಲ್ಲಿದೆ. 40 - 45 ಕುಟುಂಬವಿರುವ ಈ ಪುಟ್ಟ ಹಳ್ಳಿಯಲ್ಲಿ ಹೆಂಗಸರೇ ಹೆಚ್ಚಿರುವಂತಿದೆ, ಅದರಲ್ಲೂ ವಯಸ್ಸಾದ ಮುದುಕಿಯರೇ ಹೆಚ್ಚು. ಹೀಗಿರೆ, ಹೊಸ ಜೀವವೊಂದು ಬರುವ ಸಂಭ್ರಮಕ್ಕೆ ಸಾಕ್ಷಿಯಾಗಲು ಹಳ್ಳಿಗೆ ಹಳ್ಳಿಯೇ ಕಾತುರವಾಗಿದೆ. ತಮ್ಮದೂ ಒಂದಷ್ಟು ಕೊಡುಗೆ ಇರಲೆಂದೋ, ತಮ್ಮ ಜ್ಞಾನ ವ್ಯರ್ಥವಾಗದಿರಲೆಂದೋ ಅಂತೂ ಊರ ಹೆಂಗಸರೆಲ್ಲ ಮಹಾದೇವಿಗೆ ತಮ್ಮ ಹೆರಿಗೆಯ ದಿನಗಳನ್ನ, ತಾವು ಕುಡಿದ ಕಷಾಯಗಳ ಪಟ್ಟಿಯನ್ನೇ ಕೊಡುವುದಿದೆ.

------------------------------------------------------------------------ ತಾರೀಖು -----------------------------------------------------------------------------------
ದಿನಗಳು ಶರವೇಗದಲ್ಲಿ ಚಲಿಸುತ್ತ, ತಾರೀಖು 13 ಆದದ್ದೇ ತಿಳಿಯಲಿಲ್ಲ ಈಕೆಗೆ.
"ಅಮ್ಮ, ಇವತ್ತು 13,ಡಾಕ್ಟ್ರು ನೋಡ್ಕೋ ಬರೋಣವೆ?"
"ತಾಳು..., ಈರವ್ವ ಒಮ್ಮೆ ಬಂದೋಗ್ಲಿ"
ಈರವ್ವ, ಈ ಊರಿಗೆ ಚಿರಪರಿಚಿತ ಸೂಲಗಿತ್ತಿ. ಈಕೆಯ ಕೈ ರೇಖೆಗಳು ಹೆರಿಗೆ ಮಾಡಿಸಿಯೇ ಸವೆದು ಹೋಗಿದೆಎಂಬುದು ಊರವರ ಆಂಬೋಣ.
"ಅದ್ಯಾವ್ ಸೀಮೆ ಡಾಕ್ಟ್ರೇ ಬಿಡು ತಾಯಿ, ನಾ ಕಂಡಿಲ್ದಿರೋದೇ?"
"ಏನೋ ಈರವ್ವ, ನಿಂಗೆ ಗೊತ್ತಾಗ್ದೇ ಇರೋದ್ ಏನ್ ಉಂಟೆ?"
"ಅಲ್ಲವ್ವ, ಡಾಕ್ಟ್ರ್ನ ಒಮ್ಮೆ ನೋಡಿ ಬರೋಣ, ಅವ್ರು ಬರ್ಲೆ ಬೇಕು ಅಂದವರಲ್ಲ"
"ನಿಂಗೆ ತಿಳಿಯಾಕಿಲ್ಲ, ಸುಮ್ನೆ ದುಡ್ಡು ಪೀಕೋ ನಾಟಕನವ್ವ ಅವರ್ದು, ಇವಗೇನ್ ದಿನ ಅಗೀತೆ? ೧೫ ಕ್ಕೆ ಅಲ್ವೇ ದಿನ ತುಂಬೋದು?
"ಹುಂ, ಡಾಕ್ಟ್ರು 2 ದಿನ ಮುಂಚೆನೇ ಬರೋಕೆ ಹೇಳವ್ರೆ"
"ಅದ್ನೇ ನಾನು ಹೇಳ್ತಿರೋದು, ಅವ್ರು ಹಂಗೆಯ... ಸುಮ್ನೆ ಕರಿಯೋದು 2 ದಿನ ಮುಂಚೆ , ದುಡ್ಡು ಮಾಡೋಕೆ ಮುಂಡೆಗಂಡರು, ನಂಗಂತೂ ಖಾತ್ರಿ ಗಂಡು ಮಗ ಅಂತಾ, 9 ತಿಂಗ್ಳು 9 ದಿನಕ್ಕೆ ಹುಟ್ಟೋದವ್ವ, ನೀ ಆರಾಮಾಗಿರು, ನೋವು ಬಂತೋ, ನೀರು ಹೋಗಾಕೆ ಸುರು ಆಯ್ತೋ ಇಲ್ಲೋ ಹೇಳಿ ಕಳಿಸು, ಏನವ್ವ?"
"ಹುಂ, ಈರವ್ವ, ನೀ ಹೇಳಿದಂಗೆ, ನಂಗ್ ಮಾಡ್ಸಿದ್ದು ನೀನೆ ಅಲ್ವೇ?"


------------------------------------------------------------------- ಜಿಲ್ಲಾಸ್ಪತ್ರೆ ---------------------------------------------------------------------------------------------
"ನೋಡಿ ಸರ್, ಡ್ಯೂಟಿ ಡಾಕ್ಟ್ರೇಗೆ ಹೇಳಿದ್ದೀವಿ ....ಬರ್ತಾರೆ"
"ಏನೋ ಮಾಡ್ರವ್ವ, ಮಗ ಕಣ್ಣೇ ತೆರೆದಿಲ್ಲ ಸಂಜೆ ಇಂದವ"
"ಅಯ್ತು... ಅಯ್ತು, ಅಲ್ಲಿ ಫಾರ್ಮ್ ಕೊಡ್ತಾರೆ ತುಂಬಿ ಬನ್ನಿ, ಕಾರ್ಡ್ ಕೊಟ್ಟಿದಾರ?..... ಕೊಡಿ ಅದನ್ನೆಲ್ಲ....". ಅಷ್ಟರಲ್ಲೇ ಡಾಕ್ಟರ್ ಓಡೋಡಿ ಬಂದರು ....
ಡಾಕ್ಟರ್ ಸ್ಮಿತಾ, ಪೇಷಂಟ್ ಲೇಬರ್ ರೂಮ್ ಲಿ ಇದಾರೆ, ಅರ್ಜೆಂಟ್ ಇದೆ, There is clear fetal distress, she is bleeding excessively , I presume an immediate C-section is required, over to you madam.
"Ok, prepare the theater and call her parents here ...."
"ಈ ಹುಡುಗಿಗೆ ನಾನು ಡೇಟ್ ಕೊಟ್ಟಿರೋದು 13 , ಇವತ್ತು ತಾರೀಖು ಎಷ್ಟು?" ಸ್ಮಿತಾ ಕಣ್ಣು ಕೆಂಪು ಮಾಡಿಯೇ ಕೇಳಿದರು.
"17 ಆಗಿತ್ರೀ ..., ಏನೋ ಮಾಡವ್ವ, ನಮ್ಮವ್ವ ನೀನು, ನಿನ್ನೆ ನಂಬಿಕೊ ಬಂದೀನೇ ತಾಯಿ..." ಸಾಕವ್ವ ಆಸ್ಪತ್ರೆಯೇ ನಲುಗುವಂತೆ ಕಣ್ಣೀರು ಸುರಿಸಿದ್ಲು.
"ಹೀಗೆ ಲಾಸ್ಟ ಟೈಮ್ ಗೆ ಕರ್ಕೊಂಡ್ ಬರ್ತೀರಿ ಇಲ್ಲಿಗೆ, ಆಪರೇಷನ್ ಮಾಡ್ಬೇಕು, ಎಲ್ಲದಕ್ಕೂ ರೆಡಿ ಇರ್ಬೇಕು ನೀವು, ಇವ್ರು ನಿಮಗೆಲ್ಲ explain ಮಾಡ್ತಾರೆ, ಅಯ್ತು ಅಂದ್ರೆ ಮಾಡ್ತೀನಿ"
"ಆಯ್ತವ, ನಿಂಗೆ ಬಿಟ್ಟಿವಿ ಎಲ್ಲ, ಸರಿ ಕಂಡಿದ್ ಮಾಡವ್ವ, ಅವಳ ಗಂಡನ್ ಮನೆಗೆ ಏನ್ ಜವಾಬ್ ಕೊಡ್ಲವ್ವ ನಾನು....."

---------------------------------------------------------------------- ಸುದ್ಧಿ -------------------------------------------------------------------------------------------------------------------
"ನೋಡಿ, ನೀವು ಇಲ್ಲಿಗೆ ತರುವ ಟೈಮ್ ಗೆ ಮಗು ಉಸಿರಾಟ ಬಹಳ slow ಆಗಿತ್ತು, ಆಪರೇಷನ್ ಮಾಡಿ ತೆಗಿಯುವುದರಲ್ಲಿ ಮಗು ತೀರಿಹೋಗಿದೆ, ನಿಮ್ಮ ಮಗಳಿಗೆ ತೊಂದರೆ ಇಲ್ಲ. ಸಂಜೆವರೆಗೂ observe ಮಾಡ್ತೇವೆ, ಸರಿ ಆಗ್ತಾಳೆ, ಸಮಾಧಾನವಾಗಿರಿ".
ಇಷ್ಟಾಗುವುದರಲ್ಲೇ ಬೆಳಗಾಗಿ, ಮಹಾದೇವಿಯ ಗಂಡನ ಮನೆಯವರೆಲ್ಲ ಜಮಾವಣೆಯಾಗಿದ್ದರು. ಆಸ್ಪತ್ರೆಯ ಮುಂದಿನ ಕಿಟಕಿ ಗಾಜೊಂದು ಫಳ್ ಎಂದು ಉದುರಿ ಬಿದ್ದಿತು, ಸ್ವಲ್ಪದರಲ್ಲೇ ಮತ್ತೊಂದು, ಮಗದೊಂದು. ಕ್ಷಣಾರ್ಧದಲ್ಲೇ ದೊಂಬಿ, ಆಸ್ಪತ್ರೆಯ ಮೇಜು, ಖುರ್ಚಿಗಳೆಲ್ಲ ಚೆಲ್ಲಾ-ಪಿಲ್ಲಿಯಾದವು.ಆದದ್ದೇನೆಂದು ಅರಿವ ಹೊತ್ತಿಗೆ ಕಾಡು ಹರಟೆಯ TV ಚಾನೆಲ್ ಒಂದು ತಲುಪಿಯೂ ಅಯ್ತು.
"ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆಯೆದುರು ಧರಣಿ". "ಹೆತ್ತವರ ಕೂಗು ಕೇಳುವವರಿಲ್ಲವೇ?"."ನರ ಭಕ್ಷಕ ಆಸ್ಪತ್ರೆ"."ಡಾಕ್ಟರ್ ಸ್ಮಿತಾ, ಈಕೆಯು ಒಂದು ಹೆಣ್ಣಾ?" ಇನ್ನಷ್ಟು... ಮತ್ತಷ್ಟು ... ಸುದ್ದಿ ಹರಿದಾಡಲಾರಂಭಿಸಿತು.


1
Reading under T&C