Kannada · Fiction

naughty ಕೋಳಿ ಕಥೆ!

Writer DP! Preetham Pais 24 Feb 17 40 Views
ನಡುಮಧ್ಯಾಹ್ನದ ಸುಡುಬಿಸಿಲಿಗೆ ನಮ್ಮೂರ ಸಂತೇಮಾಳದ ಕಡೆಗೆ ಬೈಕ್ ಹತ್ತಿ ಹೊರಟೆ. ಅದೇನು ಸುಡಗಾಡು ಕೆಲಸವಿತ್ತೋ ಕಾಣೆ, ಈಗ ನೆನಪಿಲ್ಲ. ಹೆದ್ದಾರಿಯಿಂದ ಸಂತೇಮಾಳದ ಕಡೆ ಹೋಗುವ ದಾರಿ ಕಿರಿದಾಗಿದ್ದು, ಡಾಂಬರು ಕಾಣದ್ದಾಗಿತ್ತು.ಒತ್ತೊತ್ತಾಗಿ ಬೆಂಕಿಪೊಟ್ಟಣ ಜೋಡಿಸಿಟ್ಟಂತೆ ಅಲ್ಲೆಲ್ಲಾ ಮನೆಗಳು. ಬುರ್ರೋ ಅಂತ ಬೈಕ್ ಬಿಟ್ಟುಕೊಂಡು ಹೊರಟ ನನಗೆ ಎದುರಾಗಿ ಕೋಳಿಯೊಂದು ಹಾರಿಬಂತು. ಆತ್ಮಹತ್ಯೆಯ ಯೋಚನೆಯಲ್ಲಿದ್ದ ಆ ಕೋಳಿ ಸೀದಾ ನನ್ನ ಬೈಕ್ ನ ಮುಂದಿನ ಚಕ್ರದಡಿ ತಲೆ ಕೊಟ್ಟಿತು. ವೇಗ ನಿಯಂತ್ರಿಸಲಾರದ ನನ್ನ ಬೈಕು , ಅದರ ಆತ್ಮಹತ್ಯೆಯನ್ನ ಕೊಲೆಯಾಗಿಸ ಹೊರಟಂತೆ ತನ್ನ ಹಿಂಬದಿ ಚಕ್ರವನ್ನು ಅದರ ಮೇಲೆ ಹತ್ತಿಸಿತು. ಗೋಣು ಮುರಿದು ಬಿದ್ದ ಆ ಕೋಳಿ, ವಿಲ ವಿಲ ಒದ್ದಾಡುತ್ತ, ಕೇರಿಯಲ್ಲಿದ್ದ ತನ್ನ ಬಂದು-ಬಾಂದವರನ್ನೆಲ್ಲ ಕೂಗಿ ಕರೆಯಿತು. ಕಾಡು ಹರಟೆಯಲ್ಲಿ ಬಿದ್ದಿದ್ದ ಕೇರಿಯ ಹೆಂಗಸರು, ಮಕ್ಕಳು, ಗಂಡಸರಾದಿ crime scene ಗೆ ಇಳಿದರು.


"ಅಯ್ಯೋ, ಸಂಕ್ರಣ್ಣನ್ ಮನೆ ಕೋಳಿ" ಒಂದು ಹೆಂಗಸು ಗಂಟಲು ಹರಿದು ಕೂಗಿತು.
"ಕರೀರಪ್ಪ ಸಂಕ್ರಣ್ಣನ, ಅವ್ರ್ ಮನೆಯವರನ್ನಾದರೂ ಕರೀರಿ" ಇನ್ನೊಬ ಅರುಹಿದ. ಇಡೀ ಕೇರಿಯೇ ಅಲ್ಲಿರಲು ಸಂಕ್ರಣ್ಣನ ಮನೆಯವರು ಕಳೆದು ಹೋದಾರೆ?
"ಅಯ್ಯೋ, ದಿನಕ್ ನಾಲ್ಕು ಮೊಟ್ಟೆ ಇಡ್ತಿತ್ತು ಕೋಳಿ, ಅನ್ಯಾಯ್ವಾಗಿ ಸಾಯ್ತಿದೆ" ಆ ಕೋಳಿಯ ಒಡತಿಯ ಕೂಗಾಟ ಕೋಳಿಯನ್ನೇ ಮೀರಿಸುವಂತಿತ್ತು. 
"ಅಲ್ಲಮ್ಮ, ಕೋಳಿ ರಸ್ತೆಯಲ್ಲಿದ್ದರೆ ನಾನಾದ್ರೂ ಏನ್ಮಾಡ್ಲಿ?" ಅಂಜಿಕೆಯಿಂದಲೇ ಬಾಯಿ ತೆರೆದೆ.
"ಮುಚ್ಚಪ್ಪ ಸಾಕು, ಬಂಗಾರದಂತ ಕೋಳಿ ಹೊಡ್ದಿದ್ದು ಅಲ್ದೆ, ತಲೆ ಎಲ್ಲ ಮಾತು ಬೇರೆ" ಒಡನೆಯೇ ಉತ್ತರ ಬಂತು. ಸ್ವಲ್ಪ ಧೈರ್ಯ ತಂದುಕೊಂಡ ನಾನು.
"ಬೇಕಾದ್ದು ಮಾಡ್ಕೊಳ್ಳಿ, ನಂದೇನು ತಪ್ಪಿಲ್ಲ" ಎಂದವನೇ, ಬೈಕ್ ನ accelerator ಹೆಚ್ಚಿಸ್ತಾ ಹೊರಟುಬಂದೆ.


ಸಂಜೆ ಸುಮಾರು 4ಘಂಟೆ ಸಮಯಕ್ಕೆ, ನಮ್ಮ ಅಂಗಡಿಯಿಂದ ನನ್ನಪ್ಪ ಕರೆದರು." ಬಾರೋ ಇಲ್ಲಿ ಅಂಗಡಿಗೆ" ಅಂದವರೇ ಫೋನ್ ಕಟ್ ಮಾಡಿಯಾಗಿತ್ತು. ಅವಸರವಾಗೇ ಅಂಗಡಿ ಸಮೀಪಿಸಿರೆ ಜನ ಜಾತ್ರೆ ಅಲ್ಲಿ. ಇದೇನಪ್ಪ ಅವಸ್ಥೆ ಅಂದುಕೊಳ್ಳುತ್ತ, ದಾರಿ ಮಾಡಿ ಒಳಹೋಗುವ ಹೊತ್ತಿಗೆ, "ಬಂದ ನೋಡ್ರಿ ಇವ್ನೆ", " ಬಂದ್ನಲ್ಲ, ಮಹಾರಾಯ" ಗುಂಪಿನಿಂದ ಸದ್ದು ಕೇಳಿಸಿತು. ನನ್ನ ತಂದೆ ಗಲ್ಲಾದ ಕುರ್ಚಿಯಿಂದೆದ್ದು ನಿಂತಿದ್ದರು, ಅವರ ಮುಂದೆ ಸತ್ತು ಬಿದ್ದಿದ್ದ ಕೋಳಿಯ ಕುತ್ತಿಗೆ ಹಿಡಿದು ನಿಂತಿದ್ದ ಒಬ್ಬ ಆಸಾಮಿ.
" ಅಲ್ಲ ಯಜಮಾನರೇ, ಕೋಳಿ ಹೊದ್ದಿದ್ದೆ ತಪ್ಪು, ಅದ್ರ ಮೇಲೆ ಸ್ವಲ್ಪವೂ ಕನಿಕರ ಇಲ್ದೆ ಗಾಡಿ ಬಿದ್ಕೊಂಡು ಬರೋದೇ". ಕೋಳಿ ಹಿಡಿದಿದ್ದ ಆ ಕೇರಿಯ official spokesperson ಬಾಯಿತೆರೆದ. "ಊರವರಿಗೆ ಅವಾಜ್ ಬೇರೆ ಹಾಕ್ತಾನೆ ನಿಮ್ ಮಗ, ಏನಾದ್ರು ಮಾಡ್ಕೊಳಿ, ಜುಜುಬಿ ಕೋಳಿ, ಸತ್ರೆ ಸಾಯ್ತು, ನಂಗೇನ್ ಕೇಳೋಹಾಗಿಲ್ಲ, ಅಂತೆಲ್ಲ ಅಂದ" ಕೋಳಿಯ owner ಒಂದಕ್ಕೆ ನಾಲ್ಕು ಸೇರಿಸಿ ಹೇಳಿದಳು. ನಾನು ಬಾಯಿತೆರೆವ ಸೂಚನೆ ಅರಿತ ನನ್ನ ತಂದೆ, ನಿಂತ್ಕೋ ಸುಮ್ನೆ ಅಂತ ನನ್ನ ಗದರಿಸಿ, ಕೇರಿಯವರ ಮೆಚ್ಚುಗೆಗಳಿಸ್ತಾ.... "ಆಯ್ತ ಬಿಡಿ ಹೋಗ್ಲಿ, ಒಂದ್ ನ್ಯಾಯ ಮಾಡೋಣ, ಏನ್ ಮಾಡ್ಬೇಕ್ ಹೇಳಿ, ಸುಮ್ನೆ ಮಾತಾಡಿ ಅಂಗಡಿ ಮುಂದೆ ನೀವು ನಿಲ್ಲೋದ್ ಬೇಡ" ಇತ್ಯರ್ಥ ಮಾಡ ಹೊರಟರು."400 ರುಪಾಯ್ ಕೊಡ್ರಣ್ಣಾ ಸಾಕು, ನಾಟಿ ಕೋಳಿ ರೇಟ್ ಗೊತ್ತಲ್ಲ, ಮೊಟ್ಟೆ ಇಡೋ ಕೋಳಿ ಬೇರೆ, ನಾವೇನ್ ಹೆಚ್ಚಿಗೆ ಕೇಳ್ತಿದ್ದಿವೆ? ಏನ್ರಪ್ಪ?" ಅಂದ ಆ ಆಸಾಮಿ. ಜನವೆಲ್ಲ ದಿವ್ಯದರ್ಶನವಾದಂತೆ "ಹೌದೌದು, 400 ಹೆಚ್ಚಲ್ಲ" ಅಂದಿತು. "ಸರಿ, 400 ಕೊಡ್ತೀನಿ, ಕೋಳಿ ಬಿಟ್ಟು ಹೋಗಿ" ವ್ಯವಹಾರಸ್ಥ ನನ್ನ ತಂದೆ ಹೇಳಿದರು. "ಕೋಳಿ ಬಿತ್ತೋಗ್ಬೇಕೇ? ಅಲ್ಲಅಣ್ಣ, ಕೋಳಿ ಸತ್ತು ೧ಘಂಟೆ ಆಗಿದೆ, ಅದನ ಇಟ್ಕೊಂಡ್ ಏನ್ ಮಾಡ್ತೀರಿ?"  "ಅದು ನನ್ನ ಕಷ್ಟ, ಕೋಳಿ ಸಾಯ್ಸಿದನೆ ನಮ್ಮ ಹುಡ್ಗ, ಅದ್ರ ಬೆಲೆ 400 ಹೇಳ್ತಿದ್ದೀರಿ, ಕೊಡ್ತೀನಿ ಅಷ್ಟೇ" ಈ ಸಂಧಾನದ ಸಾಧ್ಯತೆಯನ್ನ ಅಪೇಕ್ಷಿಸಿರದ ಜನ ಸುಮ್ಮನಾದರು. ನನ್ನ ತಂದೆ ಮುಂದುವರಿಸ್ತಾ... " ನಾನು ನ್ಯಾಯನೇ ಮಾತಾಡ್ತಿದಿನ್ರಾಪ್ಪ, ನೋಡಿ ಮುಂದಿನದ್ದು ನಿಮ್ಮಿಷ್ಟ" ಅಂದು, ಕುಳಿತರು. ಆಸಾಮಿ, ಕೋಳಿಯ ಒಡತಿಯನ್ನೊಮ್ಮೆ ದ್ರಿಷ್ಟಿಸಿ, " ಆಯ್ತು, ಯಜ್ಮಾನ್ರೆ" ಅಂದ.
ಅದೇ ರಾತ್ರಿ ನನ್ನ ತಾಯಿ, "ಬಹಳ ದಿನದಮೇಲೆ ನಾಟಿ ಕೋಳಿ ತಂದಿದೀರಿ ಅಪ್ಪ-ಮಗ, ಒಳ್ಳೆ ಆಯ್ತಲ್ವಾ ಊಟ, ಮನೆಯೆಲ್ಲ ಘಮ್ ಅಂತಿದೆ" ಅಂದ್ರು. ನನ್ನಪ್ಪ "ಹಾ! ನಿನ್ ಮಗ ನಾಟಿ ಕೋಳಿ ಬೇಕಂತ ಸಂತೆ ಮಾಳದಿಂದ 400 ರುಪಾಯ್ ಕೊಟ್ಟು ತಂದಿದಾನೆ ನೋಡು" ಅಂದವರೇ, ನನ್ನೆಡೆ ಕಿರುನಗೆ ಬೀರಿದರು.2
Reading under T&C