Kannada · Fiction

ಪೂರ್ವಗ್ರಹ

Writer DP! Preetham Pais 03 Sep 19 17 Views
"ಅರೇ, ಬರ್ಲಿ ಬಿಡ್ರಿ! ಅವ್ರಿಗೂ ಚನ್ನಗಿರಿಯಲ್ಲಿ ಏನೋ ಕೆಲಸ ಇರ್ಬೇಕು" ಪಾರ್ವತಿ ಗಂಡನಿಗಂದಳು.

"ಅಲ್ವೇ! ನಮ್ಮ ಗಾಡಿಲೇ ಬರ್ತಾರಂತೆ, ಜಾಗ ಆಗ್ಬೇಡವ?" ಲಿಂಗಪ್ಪನೂ ತನ್ನ ಸಂಕಟ ತಿಳಿಸಿದ. 

"ಅವರು ಗಂಡಿನ ಅಕ್ಕ-ಭಾವ, ಅವರಿಗೇ ಜಾಗ ಇಲ್ಲಾ ಅನ್ನೋಕಾಗತ್ಯೇ? ನೀವೂ, ಅಮ್ಮನೂ ಮಮತನೊಟ್ಟಿಗೆ ಕಾರ್ ನಲ್ಲಿ ಹೋಗಿ. ನಾನು ಬಸ್ ಗೆ ಬರ್ತೀನಿ" 

"ನೀನಿಲ್ದೆ ಮದ್ವೆಗೆ ಬಂಗಾರ-ಬಟ್ಟೆ ತೆಗಿಯೋಕಾಗತ್ಯೇ?" 

"ಸರಿ, ಒಂದು ಕೆಲಸ ಮಾಡಿ. ಮೊದಲು ಬಂಗಾರ-ಬಟ್ಟೆಗೆ ಹೋಗ್ಬೇಡಿ. ಬಂಡೇ ಸಾಮಾನು ತೆಗಿಯೋಕೆ ಹೋಗ್ಬಿಡಿ, ಅಷ್ಟರಲ್ಲಿ ನಾನು ಬಂದುಬಿಡ್ತೀನಿ" 

"ಬಂಡೇ ಸಾಮಾನಿಗಾದ್ರೂ ನೀನು ಬೇಡವೇನೇ?" 

"ಪಾಯ್ಸಣ್ಣನ ಅಂಗಡೀಲಿ ಬಹಳ ರಷ್ಹು, ಅಲ್ಲಿ ಲೆಕ್ಕ ಹಾಕಿಸೋ ಒಳಗಾಗಿ ನಾನು ಬರ್ತೇನೆ, ನಡೀರಿ ಇವಾಗ" 

ಒಲ್ಲದ ಮನಸ್ಸಿನಿಂದಲೇ ಕಾರ್ ಕೀ ಕೈಗೆತ್ತಿಕೊಂಡ ನಿಂಗಪ್ಪ. 

 
ಮಮತಾಳ ಮದುವೆಗೆ ಅವಸರವೇನು ಇದ್ದಿಲ್ಲ. ಲಿಂಗಪ್ಪ ಎರಡು ತಿಂಗಳ ಹಿಂದೆ ಚನ್ನಗಿರಿಯ ಶುಕ್ರವಾರದ ಸಂತೆಗೆ ಹೋದಾಗ, ಅಚಾನಕ್ಕಾಗಿ ಮಮತಾ ಆಟೋ ಹಿಡಿದು ಹೋಗುವುದ ಕಂಡ. ಬಸ್ ನಲ್ಲೇ ಓಡಾಡೋ ಹುಡುಗಿ ಆಟೋ ಹತ್ತಿ ಹೋದದ್ದಾದರೂ ಎಲ್ಲಿಗೆ? ಎಂದು , ತಾನೂ ಎದೆ ಮಟ್ಟ ಲುಂಗಿ ಎತ್ತಿ splendor ಬೈಕ್ ಏರಿ ಹಿಂದೆಯೇ ಹೊರಟ . ಮಮತಾ ಸಂತೆ ಮಾಳ ದಾಟಿ ಮುಸಲ್ಮಾನರ ಕೇರಿಯ ಅಡ್ಡ ರಸ್ತೆಯಲ್ಲಿ ಆಟೋ ನಿಲ್ಲಿಸಿ ಇಳಿದಳು. ಸ್ವಲ್ಪ ಹಿಂದೆಯೇ ಲಿಂಗಪ್ಪನೂ ನಿಂತ. ಹುಡುಗಿ ರಸ್ತೆ ಬದಿಯೇ ನಿಂತವಳು ಯಾರನ್ನೋ ಕಾಯುತ್ತಿರುವಂತೆ ಕಂಡಿತು. ಹತ್ತು-ಹದಿನೈದು ನಿಮಿಷ ಕಳೆದು ಹುಡುಗನೋರ್ವ ಬೈಕ್ ತಂದು ಅವಳ ಬಳಿ ನಿಲ್ಲಿಸಿದ. ಕೂದಲನ್ನ ವಿಚಿತ್ರವಾಗಿ ಕೆರೆದು, ಅದರ ಮುಂತುದಿಗೆ ವ್ರಣ ಹಿಡಿದಂತೆ ಕಾಣುವ ಬಣ್ಣ ಹಚ್ಚಿದ್ದ. ಕೆಂಪು ಬಣ್ಣದ ಬೈಕ್ ಗೆ ಹಸುರು ಬಣ್ಣದ ಹೆಲ್ಮೆಟ್. ನೀಲಿ ಬಣ್ಣದ ಪ್ಯಾಂಟ್ ಗೆ ಹಳದಿ ಬಣ್ಣದ ಶರ್ಟ್. ತನ್ನ ಮಗಳಿಗಿಂತ ತುಸು ಹೆಚ್ಚೇ ಕೈಗಳಿಗೆ ಬಳೆ ತೊಟ್ಟು, ಕಿಂದರಿಜೋಗಿಯಂತೆ ಕಾಣುತಿದ್ದ. ಹುಡುಗ ಬೈಕ್ ನಿಂದ ಇಳಿದು ಮಮತಾಳ ಬಳಿ ಬಂದ. ತನ್ನ ಜೇಬಿನಿಂದ ಫೋನ್ ಒಂದನ್ನ ಹೊರತೆಗೆದು ಮಮತಾಳ ಕೈಗಿತ್ತ. ಬೇಡ ಎನ್ನುವಂತೆ ಮುಖ ಮಾಡಿದ ಮಮತಾಳ ಕೈ ಹಿಡಿದು ಅವಳ ಅಂಗೈಗೆ ಫೋನ್ ತುರುಕತೊಡಗಿದ.

ಮರುಕ್ಷಣ ಅವಳ ಕೈ ಹಿಡಿದಂತೆಯೇ ಫೋನ್ ಒಟ್ಟಿಗೇ ಮಣ್ಣು ಮುಕ್ಕಿದ ಹುಡುಗ. ಲಿಂಗಪ್ಪನ ಕಸುಬಿನ ಕೈ ಹುಡುಗನ ಕುತ್ತಿಗೆಗೆ ಹಿಂದಿನಿಂದ ಬಡಿದು ಅವನಿಗೆ ಅರೆಕ್ಷಣ ಕತ್ತಲೆ ಕವಿದಂತಾಯ್ತು.ಲಿಂಗಪ್ಪನ "ನಡಿಯೇ" ಎಂಬ ಘರ್ಜನೆ ಸಾಬ್ರ ಹಟ್ಟಿಯ ಮನೆಗೆಲ್ಲಾ ಮಾರ್ದನಿಸುವುದರ ಒಳಗಾಗಿ ಅಪ್ಪ-ಮಗಳು ಊರದಾರಿಯಲ್ಲಿದ್ದರು. 

 

"ಬಾರಮ್ಮ, ಹಿಂದೆ ಕೂರುವಿರಂತೆ ಇಬ್ಳಾರು. ಆ ಬ್ಯಾಗ್ ತೆಗಿಯೇ ಮಮತಾ, ಹಿಂದೆ ಡಿಕ್ಕಿಗೆ ಹಾಕು" ಲಿಂಗಪ್ಪ ಅಳಿಯನಾಗುವ ಹುಡುಗನ ಅಕ್ಕ-ಭಾವನನ್ನ ಕಾರ್ ನ ಒಳಗೆ ಕುಳ್ಳಿರಿಸಿದ. ಲತಾ ಮತ್ತು ಕಾರ್ತೀಕ ಇವರ ಹೆಸರುಗಳು.

"ಆಂಟಿ, ಬರ್ಲಿಲ್ವಾ ಅಂಕಲ್" ಲತಾ ಕೇಳಿದಳು. 

"ಡೇರಿ ಗೆ ಹಾಲು ಹಾಕಿ ಬರ್ತೀನಿ,ಮುಂದೆ ಹೋಗಿರಿ ಅಂದ್ಲು. ಇನ್ನೇನು ಬಸ್ ಹತ್ತಿ ಬರ್ತಾಳೆ" 

"ನೀನು ಹೇಗಿದ್ದೀಯ ಮಮತಾ?" ಅವಳು ಉತ್ತರಿಸ ಸಮಯ ಕೊಡದೆ. "ಮದುಮಗಳ ಕಳೆಯೇ ಇಲ್ಲಾ ನೋಡು, ಭಾವನಾ ಬ್ಯೂಟಿ ಪಾರ್ಲರ್ ಇದೆ ನೋಡು ಚನ್ನಗಿರಿಲಿ, ಬ್ಲೀಚ್ ಮಾಡ್ಸಿ ಬಿಡು, ಮದ್ವೆಗೆ ಇನ್ನು ಇರೋದೇ ಒಂದು ತಿಂಗಳಲ್ವಾ..." 

"ಆಯ್ತಕ್ಕ", ಎಂದಳು ಮಮತಾ. 

ಕಾಡು ಹರಟೆ ನಡೆದಿರಲು ಚನ್ನಗಿರಿಯ ಸರ್ಕಾರಿ ಡಿಗ್ರಿ ಕಾಲೇಜು ಮುಂದೆ ಕಂಡಿತು. 

"ಮಮತಾ ನೀನು ಇಲ್ಲೇ ಅಲ್ವೇ ಓದಿದ್ದು" ಲತಾ ಮಾತಿಗೆಳೆದಳು. 

"ಹೌದಕ್ಕ" 

"ಲಾಸ್ಟ್ ಇಯರ್ ಗೆ ನಿಲ್ಲಿಸಿಬಿಟ್ಟೆ ಅಲ್ವಾ? ಮುಗಿಸಿಬಿಟ್ಟಿದ್ರೆ ಆಗೋದು" 

"ನಾನು ಹಾಗೆ ಅಂದೇ, ಅಷ್ಟರಲ್ಲಿ ಸಂಭಂದ ಕೂಡಿಬಂತಲ್ಲ..." ಲಿಂಗಪ್ಪ ಉತ್ತರಿಸಿದ. 

ಕಾಲೇಜಿನ ಗೋಡೆಗಳು ಕಂಡದ್ದೇ ಮಮತಾಳ ಒಡಲಿಗೆ ಹುಳಿ ಸೇರಿದಂತಾಯ್ತು. ಆವತ್ತು ಆಗಿದ್ದರ ನೆನಪು, ಗಾಯ ಮಾಸಿದರೂ ಕಪ್ಪಗೆ ಕೊರೆವ ಕಲೆಯಂತೆ ಕಣ್ಮುಂದೆ ಸರಿಯಿತು. 

 

ಅಂದು ಜ್ವರಕ್ಕೆ ನಲುಗಿ ಮುದುರಿ ಕೂತಂತೆ, ತಾನು ಅಪ್ಪನ ಹಿಂದೆ ಕುಳಿತಿದ್ದಳು. ಗಾಳಿ ಸಿಳ್ಳು ಹೊಡೆದಂತೆ ತನ್ನೆರಡೂ ಕಿವಿಯನ್ನ ಸೀಳುತಿತ್ತು. ತನ್ನಪ್ಪ ಹೀಗೆ ಯಮವೇಗದಲ್ಲಿ ಬೈಕ್ ಚಲಾಯಿಸಬಲ್ಲವರೆಂದು ತಿಳಿದದ್ದೇ ಆವಾಗ. ಮನೆ ತಲುಪಿದ್ದೇ ತಡ, ಲಿಂಗಪ್ಪ ಏರಿಸಿದ್ದ ಲುಂಗಿಯನ್ನ ಕೆಳಮಾಡಿದ.

"ಸಾಬ್ರು ಸಹವಾಸ ಮಾಡ್ತಿಯೇನೇ? ಯಾವನೇ ಅವನು ತಿರಬೋಕಿ? ನನ್ನ ಮುಂದೆಯೇ ಕೈ ಮುಟ್ಟುತ್ತಾನೆ ಹಾಳಾದವನು" 

"ನನ್ನ classmate ಅಪ್ಪ, ನೀವೂ ನೋಡಿದಂತೇನು ಆಗಿಲ್ಲ" 

"ಆಗಿಲ್ಲ ಅಂದರೆ? ಆಗೋದಿತ್ತು, ನಾನು ಬಂದೆ ಅಷ್ಟೇ..." 

"ಯಾರೇ ಮಮತಾ ಅದು, ಏನು ನಡೆಯಿತು" ತಾಯಿ ಕೇಳಿದಳು. 

"ಏನಿಲ್ಲ ಅಮ್ಮ, ನನ್ನ ಫೋನ್ ಕೊಡೋಕೆ ಬಂದಿದ್ದ ಅಷ್ಟೇ" 

"ಅಷ್ಟೇ, ಅಷ್ಟೇ ... ಫೋನ್ ಕೊಡೋವ್ರು ಕೈ ಎಳೆದಾಡೋಲ್ಲ. ಊರವರು ಎಷ್ಟು ಜನ ಬರ್ತಾನೆ ಚನ್ನಗಿರಿಗೆ, ಯಾರಾದರೂ ನೋಡಿದ್ದರೆ ಏನು ಅಂದುಕೊಳ್ತಿದ್ದರೋ" 

"ಯಾರೋ ಏನೋ ಅಂದುಕೊಳ್ಳೋದೇನು, ನೀವೇ ಅಂದುಕೊಳ್ತಾ ಇದ್ದೀರಲ್ಲ" 

"ನಾನು ಕಂಡಿದ್ದಕ್ಕೆ ಅಂದುಕೊಂಡದ್ದು. ಯಾವ ಫೋನ್ ಅದು ಏನು ಕೊಡ್ತಾ ಇದ್ದ ಅವ್ನು?" 

"ಕೊಡೋಕೆ ಬಿಟ್ರಾ ನೀವೂ?" 

"ಎದುರು ಮಾತಾಡು,ಇದಕ್ಕೇ ಕಾಲೇಜು ಕಳಿಸೋದು ನಾನು, ನಾಲಿಗೆ ಹರಿದು ಹಾಕ್ತೀನಿ" 

"ಹಾಕಿ" 

ಅತಿಥಿಗಳಿಗೆಂದು ಮೇಜಿನಮೇಲಿದ್ದ ಚೊಂಬು ನೀರಿನೊಟ್ಟಿಗೆ ಮಮತಾಳ ಹಣೆಗೆ ಬಡಿದು ನೆಲದಮೇಲೆ ಪುಟಿಯಿತು. 

 

"ಇವರಿಗೆ TUMCOS ನಲ್ಲಿ ಕೆಲಸವಿದೆಯಂತೆ, ಇವರು ಹೋಗ್ತಾರೆ" ಲತಾ ಗಂಡನ ಕುರಿತು ಹೇಳಿದಳು.

"ನೀವು ಬರಬಹುದಿತ್ತು" ಮಾತಿಗೆ ಲಿಂಗಪ್ಪನೂ ಹೇಳಿದ. 

"ಹಾಂ ... ಇರಲಿ ಹೋಗಿಬನ್ನಿ, ಲತಾ ಇದ್ದಾಳಲ್ಲ" ಮಾತಿಗೆ ತಾನೂ ನುಡಿದ ಕಾರ್ತೀಕ. 

"ಇವಳಮ್ಮ ಇನ್ನೇನು ಬರ್ತಾಳೆ ಮೊದಲು ಬಂಡೇ ಸಾಮಾನಿಗೆ ಹೋಗೋಣ" ಲಿಂಗಪ್ಪ ಮೊದಲೇ ಗೊತ್ತುಮಾಡಿದಂತೆ ನುಡಿದ. 

"ಬಂಡೇ ಸಾಮಾನಿಗೆ ಅರ್ಜೆಂಟ್ ಯಾಕೆ ಅಂತೀನಿ? ಬಂಗಾರದ ಅಂಗಡೀಲಿ ವಿಪರೀತ ಜನ, ಬೆಳಗ್ಗೆಯೇ ಹೋದರೆ ಒಳ್ಳೆದಿತ್ತು" 

"ಅಮ್ಮಾನೂ ಬರಲಿ ಅಕ್ಕ, ಆಮೇಲೆ ಬಂಗಾರದ ಅಂಗಡಿಗೆ ಹೋದರಾಯ್ತು" 

"ಹಾಗಂತೀಯಾ? ಸರಿ ಬಿಡು. ಟೀ ಏನಾದರೂ ಕುಡಿದು ಹೋಗೋಣವೆ ಹೇಗೆ?" 

"ಹಾಗೆ ಆಗಲಿ, ಟೀ ಕುಡಿದು ನಿಮ್ಮನೆಯವರು ಹೊರಡಲಿ, ನಾವು ನಮ್ಮ ಕೆಲಸಕ್ಕೆ ಹೋಗೋಣಂತೆ" ಲಿಂಗಪ್ಪ ಸರ್ವರನ್ನೂ ಬಸ್ ನಿಲ್ದಾಣದ ಬಳಿಯಿರುವ ಅನ್ನಪೂರ್ಣೇಶ್ವರಿ ಹೋಟೆಲ್ಗೆ ಕೊಂಡೊಯ್ದ. 

ಹೋಟೆಲ್ ಹೊಕ್ಕಮೇಲೆ ಬರಿಯ ಟೀ ಕುಡಿದರಾದೀತೇ? ಒಂದು ದೋಸೆ, ಎರಡು ಇಡ್ಲಿ, ಮೂರು ಪೂರಿ ಎನ್ನುತ್ತಾ ಕಾಲ ಕಳೆದದ್ದೇ ಗೊತ್ತಾಗಲಿಲ್ಲ. 

"ಮಮತಾ, ನಿನ್ನ ಫೋನ್ ಎಲ್ಲಿ? ಅಮ್ಮ ಹೊರಟರ ಕೇಳು" ಮಡದಿ ಸಮೀಪವಿಲ್ಲದಿರ ನೆನಪಾಯ್ತು ಲಿಂಗಪ್ಪನಿಗೆ. 

"ನನ್ನ ಫೋನ್ ತಂದಿಲ್ಲ, ಮನೇಲೆ ಬಿಟ್ಟು ಬಂದೆ" 

ಅಷ್ಟರಲ್ಲೇ ಲಿಂಗಪ್ಪನ ಫೋನು ರಿಂಗಣಿಸಿ, ಹೆಂಡತಿಯೂ ಚನ್ನಗಿರಿ ನಿಲ್ದಾಣ ತಲುಪಿಯಾಯಿತೆಂದು ತಿಳಿದು, ಹೋಟೆಲ್ ನ ಬಿಲ್ ಪಾವತಿಸಿ ,ಹೊರಡಲು ಅವಸರಿಸಿದ. 



ಕಾಲೇಜು ಶುರುವಾಗಿ ಎರಡು ತಿಂಗಳಿಗೆ ಮಮತಾಗೆ ಫೋನು ಕೊಡಿಸಿದ್ದು. ಏಳೆಂಟು ಸಾವಿರದ ಫೋನು.ಬಹುಪಾಲು ಹುಡುಗಿಯರಂತೆ ವಸ್ತುಗಳನ್ನ ಜೋಪಾನವಾಗಿ ಇಡುತ್ತಿದ್ದಳು.ಆವತ್ತು ಕಾಲೇಜಿನಲ್ಲಿ ಅದೇನೋ ಕೆಲಸಕ್ಕೆ ಬಾರದ ಫೆಸ್ಟ್. ತರಗತಿಗಳಿಲ್ಲದಿರೆ ಎಲ್ಲರೂ ಕಾಲೇಜು ಅಂಗಳದಲ್ಲಿಯೇ ತಿರುಗಾಡುತ್ತಿದ್ದರು. ಮಮತಾ ಅಂತಿಮ ವರ್ಷದ ವಿದ್ಯಾರ್ಥಿ ಆಗಿರೆ ಒಂದು ಸ್ಪರ್ಧೆಯ ನಿಯೋಜನೆಗೆ ಗೆಳೆಯರ ಜೊತೆಗೂಡಿ ನಿಂತಿದ್ದಳು.ಒಂದು ನಿಮಿಷದಲ್ಲಿ ಅತಿ ಹೆಚ್ಚು ಮೊಟ್ಟೆಗಳನ್ನ ಹಣೆಯಿಂದ ಹೊಡೆವ ಸ್ಪರ್ಧೆ ಇದು. ಮೊಟ್ಟೆಯ ವಾಸನೆ ಸಹಿಸಬಲ್ಲವರು ಆಟಕ್ಕೆ ನಿಂತಿದ್ದರು. ಸಮಯ ನೋಡಿ ಒಂದು ನಿಮಿಷಕ್ಕೆ ಆಟ ನಿಲ್ಲಿಸುವ ಹೊಣೆ ಮಮತಾಳದ್ದು. ಹೀಗೆ ಆಟ ಪ್ರಾರಂಭವಾಗಿ, ಕೊನೆಯ ಸುತ್ತಿಗೆ ಹೋಗುವ ಕಾಲಕ್ಕೆ ಅರ್ಧ ಬಕೆಟ್ ಆಗುವಷ್ಟು ಮೊಟ್ಟೆಯ ಜೀವರಸ ತುಂಬಿತ್ತು. ಕಡೆಯ ಸುತ್ತಿಗೆ ನಿಂತವರು ಐದು ಜನ. ಕುಮಾರ, ಸುರೇಶ, ಸಂದೀಪ, ಮನು ಮತ್ತು ತೇಜು. ಮಮತಾ ತನ್ನ ಫೋನ್ ಹಿಡಿದು ಥ್ರೀ , ಟೂ .... ಸ್ಟಾರ್ಟ್ ಎಂದು stopwatch ನ ಶುರು ಮಾಡಿದಳು.

 ಆಟ 40 ಸೆಕೆಂಡ್ ದಾಟಿರಬೇಕು, ಅಷ್ಟರಲ್ಲಿ ಮನು "ಹೇ ಮೋಸ ,ಮೋಸ" ಎಂದು ಕಿರುಚಿದ. 

ಅದಕ್ಕೆ ಸಂದೀಪ "ಮುಚ್ಚೋ ಸಾಕು, ಮೋಸ ಅಂತೇ ಮೋಸ" 

"ಟೈಮ್ ಸ್ಟಾಪ್ ಮಾಡೇ" ಮನು ಎಂದ. 

"ಆಡಲೊ ಸಾಕು, ಷಂಡ" ಎಂದ ಸಂದೀಪ. 

ಒಡನೆಯೇ ಮಮತಾಳ ಬಳಿಯಿದ್ದ ಫೋನ್ ಕಸಿಯಲು ಕೈ ಮುಂದೆಮಾಡಿದ ಮನು. ಇವನ ಕೈಗಳು ಜಾರಿ ಮಮತಾಳ ಫೋನು ಮೊಟ್ಟೆಗಳ ಸಾರ ಶೇಖರಿಸಿದ್ದ ಬಕೆಟ್ ಒಳಗೆ ಪುಳಕ್ಕನೆ ಬಿದ್ದು,ಸೂರ್ಯಾಸ್ತವಾದಂತೆ ನಿಧಾನಕ್ಕೆ ಬಕೆಟ್ನ ತಳ ತಲುಪಿತು. 




"ಹೋ, ಆಂಟಿ ಹೇಗಿದ್ದೀರ? ಆಯ್ತಾ ಡೇರಿ ಕೆಲಸ" ಆಪ್ತತೆಯಿಂದ ಲತಾ ಪಾರ್ವತಿಯನ್ನ ಸಂಧಿಸಿದಳು. 

ಇದ್ಯಾವ ಡೇರಿ ಎಂದು ಯೋಚಿಸುತ್ತಲೇ, "ಹೂನಮ್ಮಾ ಕೆಲಸ ಆಯ್ತು, ಮನೆಕಡೆ ಆರಾಮ?" ಪಾರ್ವತಿಯೂ ಸ್ಪಂದಿಸಿದಳು. 

"ಬಂಡೆ ಸಾಮಾನಾದ್ರು ತೆಗೆದು ಅಯ್ತೆನೋ ಎಂದುಕೊಂಡೆ, ಇನ್ನೂ ಇಲ್ಲೇ ಇದೀರಲ್ರಿ" ಪಾರ್ವತಿ ನಿಂಗಪ್ಪನೆಡೆ ನೋಡಿದಳು. 

"ನೀನು ಬಂದೆಯಲ್ಲ, ಇನ್ನೂ ಬೇಗ ಆಗುತ್ತೆ ಕೆಲಸ. ಮೊದಲು ಎಲ್ಲಿಗೆ ಹೋಗಣ ಹೇಳು?" 

"ಬಂಗಾರದ ಅಂಗಡಿ ತೆಗೆದಿರುತ್ತೆ ಅಲ್ಲಿಗೆ ಹೋಗೋಣ, ಅಲ್ಲಿ ಮುಗಿಸಿ ಆಮೇಲೆ ನೋಡಿದರಾಯ್ತು" 

"ನಡೀರಿ ಮತ್ತೆ" ಎಂದವರೇ ಬಂಗಾರದ ಅಂಗಡಿ ತಲುಪಿ ಒಳಹೊಕ್ಕರು. 

"ಯಾವ್ ಡಿಸೈನ್ ಆಗ್ಬೇಕೇ ಮಮತಾ ನೋಡು" ತಾಯಿ ಮಗಳ ಮುಖ ನೋಡಿದಳು. 

"ನಿಂಗೆ ಸರಿ ಕಂಡದ್ದು ತೆಗಿಯಮ್ಮ" 

"ನಾನಾ ಹಾಕೊಳೋದು?" 

"ಅಯ್ಯೋ ಬಿಡಿ ಆಂಟಿ, ಅವಳಿಗೇನು ಬಂಗಾರ ಕೊಂಡು ಗೊತ್ತಿದೆ? ನಾವು ನೋಡಿ ತೆಗೆದರಾಯ್ತು"ಲತಾ ಸಹಾಯಕ್ಕೆ ಮುಂದಾದಳು. 

ಮಗಳ ಮುಖ ನೋಡಿದ ಪಾರ್ವತಿ, ನಿಟ್ಟುಸಿರು ಬಿಟ್ಟು, " ಅದು ತೋರ್ಸಪ್ಪ" ಎನ್ನುತ್ತಾ ಒಂದು ಕಡೆ ಬೊಟ್ಟು ಮಾಡಿದಳು. 




ಪಾರ್ವತಿಗೆ ಉಸಿರು ನಿಂತು, ಮರುಕ್ಷಣ ಆಮ್ಲಜನಕದ ವಿಸ್ಪೋಟ ಶ್ವಾಸಕೋಶದ ಒಳಗಾಗಿ "ಶಿವ ಶಿವ" ಎನ್ನುತ್ತಾ ಮಗಳ ಬಿಗಿದಪ್ಪಿದಳು. 

"ಏನ್ರೀ ಇದು, ಏನಾಗಿದೆ ನಿಮಗೆ, ಶಿವ... ಏನಾಯ್ತವ್ವ" ಕಣ್ಣು ಕೆಂಪಾಗಿ ಜಿನುಗುಡಲಾರಂಭಿಸಿತು. 

ಹಣೆ ಹಿಡಿದು ನೆಲಕ್ಕೆ ಮಂಡಿಯೂರಿದ ಮಮತಾ, ನೋವಿನಿಂದ ಕಣ್ಣೀರಿಟ್ಟಳು. 
ನೆಲಬಿದ್ದು ಪುಟಿದ ಚೊಂಬಿನಲ್ಲಿ ಉಳಿದಿದ್ದ ನೀರನ್ನೇ ಮಗಳ ಹಣೆಮೇಲೆ ಚೆಲ್ಲಿ "ಏನಾಗಿಲ್ಲಮ್ಮಾ, ಏನಾಗಿಲ್ಲ!" ಎಂದು ಹುಸಿ ನುಡಿದಳು ಪಾರ್ವತಿ.

Newton ನ ಮೂರನೆಯ ಚಲನ ನಿಯಮದನುಸಾರ 'ಪ್ರತಿಯಾಂದು ಕ್ರಿಯೆಗೂ ಒಂದು ಸಮ ಮತ್ತು ವಿರುದ್ಧ ಪ್ರತಿಕ್ರಿಯೆ ಇರುತ್ತದೆ' ಅಂತೆಯೇ, ಮಮತಾಗೆ ಬಡಿದ ಚೊಂಬಿಗಾದ ತಗ್ಗು ಮತ್ತು ಈಕೆಯ ಹಣೆಗಾದ ಉಬ್ಬು ಸಮವಾಗಿತ್ತು! 

ತನ್ನ ಕೋಪದ ಕಟ್ಟೆ ಒಡೆದು ಹೀಗೆ ಪ್ರತಿಕ್ರಿಯಿಸಬಲ್ಲೆನೆಂದರಿಯದ ಲಿಂಗಪ್ಪ ಮಗಳ ಬಳಿಸಾರಲು ಎರಡುಹೆಜ್ಜೆ ಹಾಕಿದವನು ಹಾಗೆಯೇ ನಿಂತು, 

"ನಮ್ಮ ಬಸುರಾಜ ದಿನಾಲು ಚನ್ನಗಿರಿ ಹೋಗ್ತಾನಲ್ಲ, ಅವಂಗೆ ಹೇಳ್ತಿನಿ, ದಿನಾಲು ಬಿಟ್ಟು-ಕರ್ಕೊಂಡು ಬರ್ತಾನೆ. ಬಸ್ ಅಲ್ಲಿ ಹೋಗೋದೇನು ಬೇಡ"ಎಂದ. 

ಸ್ವಲ್ಪ ಸಮಯ ಕಳೆದು ಮಮತಾಳ ಹಣೆಗಾದ ಊತ ಕಡಿಮೆಯಾಗುತ್ತಲೇ ಪಾರ್ವತಿ ಎಂದಳು, "ಏನೋ ಕೋಪಕ್ಕೆ ಹಾಗೆ ಮಾಡಿದಾರೆ ನಿಮ್ಮಪ್ಪ, ಹಾಗಂತ ಕಾಲೇಜು ಹೋಗೋದು ಬೇಡ ಅಂದಿಲ್ಲ ನೋಡು. ಬಸವರಾಜ LIC ಗೆ ಕೆಲಸಕ್ಕೆ ಹೋಗ್ತನಲ್ಲ, ದಾರೀಲೆ ಕಾಲೇಜಿಗೆ ಬಿಡ್ತಾನೆ.ಹತ್ತು ನಿಮಿಷಕ್ಕೆಲ್ಲ ಕಾಲೇಜು ಸೇರ್ಬೋಹದು. ಅಜ್ಜಿಗೆ ವಿಷಯ ಎಲ್ಲ ಹೇಳ್ಬೇಡ,ಏನು..? ಮಮತಾ... ಗೊತ್ತಾಯ್ತೆನವ್ವ..." ಎನ್ನುತ್ತಾ ತಾಯಿಯಾದವಳ ಕರ್ತವ್ಯ ನಿರ್ವಹಸಿದಳು. 

 

"ನಮ್ಮ ಹೇಮಂತುಗೆ ರೂಬಿ ಅಂದರೆ ಹುಚ್ಚು" ಲತಾ ತನ್ನ ತಮ್ಮನ ಇಷ್ಟ-ಕಷ್ಟಗಳ ಸುಳಿವು ಕೊಟ್ಟಳು.

"ರೂಬಿ...ಇದೇ ಕೆಂಪನಂದಲ್ವಾ?" ಪಾರ್ವತಿ ಅದರೆಡೆ ದೃಷ್ಟಿ ಹರಿಸಿ ಕೇಳಿದಳು. 

"ಹೂ , ಅದೇ... ಅದೇ. ಅವನ ಬೆರಳು ನೋಡಿದಿರಾ? ... ಬಿಡಿ.. ಮಮತಾ ನೋಡಿರ್ತಾಳೆ.... ನೋಡಿದೀಯಲ್ವೇನಮ್ಮಾ? ಎರಡೆರಡು ರೂಬಿ ಉಂಗುರ ಹಾಕಿದಾನೆ" 

"ಹಾಂ, ಬೆಳ್ಳಿ ಉಂಗುರ" ಮಮತಾ ನಿರ್ಲಿಪ್ತಳಾಗಿ ಹೇಳಿದಳು. 

"ಅಯ್ಯೋ, ಬಂಗಾರದ್ದು ಹಾಕ್ಕೊಳೋ ಅಂದ್ರೆ ಎಲ್ಲಿ ಕೇಳ್ತಾನೆ.ಬೆಳ್ಳಿ ಉಂಗುರ ಫ್ಯಾಷನ್ ಅಂತೇ. ನಮ್ಮ ಕಾಲಕ್ಕೆ ಆಯಿತು ನೋಡಿ ಬಂಗಾರ" 

ತನಗಿಂತ ಏಳೆಂಟು ವರುಷ ದೊಡ್ಡವಳಾದ ಲತಾ ಯಾವ ಕಾಲದವಳು ಎಂದು ಯೋಚಿಸಿದಳು ಮಮತಾ. 

"ಒಂದು ಉಂಗುರ ಮಾಡಿಸಿದರಾಯ್ತು ಬಿಡಿ, ಅದೇನು ಹೆಚ್ಚಾಗಲ್ಲ" ಲಿಂಗಪ್ಪನೆಂದ. 

"ಛೆ, ನಾನು ಮಾಡಿಸಿ ಎಂದಿಲ್ಲ. ಹೇಮಂತುಗೆ ಇಷ್ಟ ಅಂದದ್ದು.... ಎಲ್ಲರಿಗೂ ಮಾಡಿಸೋ ಹಾಗೆ ಬ್ರೈಸೆಲೆಟ್ಟು, ಚೈನು ಮಾಡ್ಸಿದ್ರೆ ಆಯ್ತಲ್ಲ. ಯಾಕೆ ಸುಮ್ಮನೆ ನಿಮಗೂ ಖರ್ಚು..." 

"ಅಳಿಯಂಗೆ ಮಾಡ್ಸಿದ್ರು,ಮಗಳಿಗೆ ಮಾಡ್ಸಿದ್ರು ಒಂದೇ ಅಲ್ವ... ಇರಲಿ ಬಿಡಮ್ಮ ಮಾಡ್ಸೋಣಂತೆ, ಹೆಂಗೂ ಬೆರಳಿನ ಸೈಜ್ ಕೊಟ್ಟಿದಾರೆ" ಎನ್ನುತ್ತಾ ಜೇಬಿನಿಂದ ಹಳದಿ ಬಣ್ಣದ ಚೀಟಿ ಹೊರತೆಗೆದು ನೋಡಿದ. 

 

'ಪಿಮ್.. ಪಿಮ್' ... "ಅಕ್ಕಾ.... ಹೊತ್ತಾಯ್ತು...." ಮನೆಯ ಮುಂದೆ ಸ್ಕೂಟರ್ ನಿಲ್ಲಿಸಿದ್ದ ಬಸವರಾಜ.

"ಹುಷಾರು... ನಿಧಾನಕ್ಕೆ ಹೋಗಪ್ಪ ಬಸು" ರೂಢಿಗತದಂತೆ ಹೇಳಿದಳು ಪಾರ್ವತಿ. 

ಸ್ಕೂಟರ್ ಓಡಿಸುತ್ತಲೇ ಬಸವನೆಂದ " ಬ್ಯಾಗ್ ಕೊಡು ಮುಂದೆ ಇಡ್ತೀನಿ. ಆರಾಮ ಕೂರುವಿಯಂತೆ" 

"ಪರವಾಗಿಲ್ಲಣ್ಣಾ...." 

"ಕೊಡಪ್ಪಿ ಇಲ್ಲಿ..." ಸ್ಕೂಟರ್ ನಿಲ್ಲಿಸಿ ಮಮತಾಳಿಂದ ಬ್ಯಾಗ್ ಪಡೆದು ಮುಂದೆ ಇಟ್ಟುಕೊಂಡ. 

"ಆರಾಮ ಕೂರು, ಅರೆರೆ... ಕಾಲನ್ನ ಸ್ಟಾಂಡ್ ಮೇಲೆ ಇಡೋದಲ್ವಾ" ಎನ್ನುತ್ತಾ ತನ್ನ ಎಡಗೈ ಇಂದ ಮಮತಾಳ ಎಡಗಾಲನ್ನೆತ್ತಿ ಇರಿಸಿದ. 

ಅಸಾಧಾರಣ ವೇಗದಿಂದ ಹಳ್ಳಿಯಲ್ಲಿ ಸುತ್ತುವ ಇವ, ಸರ್ವೇಸಾಧಾರಣ ವೇಗದಿಂದ ಚಲಿಸುತ್ತಾ, ಸ್ಕೂಟರಿನ ಮುಕ್ಕಾಲು ಪಾಲು ಆಸನವನ್ನ ಆಕ್ರಮಿಸ ತೊಡಗಿದ. ಕಾಲೇಜು ತಲುಪುತ್ತಲೇ. 

"ಸಂಜೆ ಬರ್ತೀನಿ ಐದು ಘಂಟೆಗೆಲ್ಲ... ಹುಷಾರಿ" ಎನ್ನುತ್ತಾ ಹೊರಟ. 

"ಹೂ.." ಎಂದು ಕಾಲೇಜು ಗೇಟ್ ಒಳಹೊಕ್ಕ ಮಮತಾ, ಕ್ಯಾಂಟೀನ್ ಮುಂಬಾಗ ಅಶೋಕ ಮರಕ್ಕೆ ಒರಗಿ ನಿಂತ ತನ್ನ ಅದೇ ಸ್ನೇಹಿತನ ಕಂಡಳು. 

"ಹೇ, ಮಮ್ಮಿ ... ಏನಾಯ್ತೆ? ನಿಮ್ಮಪ್ಪ ಏನಂದ್ರು" ಕೇಳಿದನವ. 

ಅವನ ಎಡ ತೋಳು ಹಿಡಿದವಳು, ಕಣ್ಣು-ಮೂಗು-ಬಾಯಿಂದ ನೀರು ಸುರುಸಿತ್ತಾ ಮಗುವಿನಂತೆ ಅತ್ತಳು. 

 

"ನಿಮ್ಮದೆಲ್ಲಾ, ಬಟ್ಟೆ ತೆಗೆದು ಆಯ್ತೆನು ?" ಪಾರ್ವತಿ, ಲತಾಳಿಗೆ ಕೇಳಿದಳು. 

"ಇಲ್ಲ ಆಂಟಿ, ದಾವಣಗೆರೆ ಅಂತ ಒಬ್ರು, ಶಿವಮೊಗ್ಗ ಅಂತ ಒಬ್ರು... ಹೇಮಂತು ಬಿಡಿ ಬೆಂಗಳೂರಿನಲ್ಲಿ ಸೂಟ್ ಹೊಲಿಸ್ತಿದಾನೆ. ನೀವು 30 ಸಾವಿರ ಅವನ ಬಟ್ಟೆಗೆ ಅಂತ ಕೊಟ್ಟಿದ್ರಲ್ಲ, ಇನ್ನು ಹತ್ತು ಖರ್ಚಾಗಲಿ ಅಕ್ಕಾ ಅಂತ.... ಅದ್ಯಾವ್ದೋ ಇಂಗ್ಲೆಂಡ್ ಸೂಟ್ ಅಂತಪ್ಪ...." ಲತಾ ಮುಂದುವರಿಸುತ್ತಿರೆ, 

"ಬಟ್ಟೆ ಒಪ್ಪಿಗೆ ಆಗದಿದ್ರೆ ಎಕ್ಸ್ಚೇಂಜ್ ಮಾಡ್ತೀರಾ ಅಂಕಲ್" ಮಮತಾ ಅಂಗಡಿ ಮಾಲೀಕನಿಗೆ ಕೇಳಿದಳು. 

"ಒಂದು ವಾರ ಟೈಮು, ಇಷ್ಟ ಆಗ್ಲಿಲ್ಲ, ಬಣ್ಣ ಹೋಯ್ತು, ನೂಲು ಬಿಡ್ತು... ಏನೇ ಕಂಪ್ಲೇಂಟು ಇದ್ರೂ ಎಕ್ಸ್ಚೇಂಜ್ ಮಾಡ್ತೀವಿ... ಒಂದು ವಾರ ಅಷ್ಟೇ!" 

"ಇದು ನೋಡೇ ನೀಲಿ.... ಜಾಸ್ತಿ ನೀಲಿನು ಇಲ್ಲ... ಬಿಳೀನೂ ಅಲ್ಲ. ಗೊಂಬೆಗೆ ಹಾಕಿರೋ ಶರ್ಟ್ ನೋಡು" ಲಿಂಗಪ್ಪ ಹೆಂಡತಿಯ ಅಭಿಪ್ರಾಯ ಕೇಳಿದ. 

"ಸೀರೆ ಎಲ್ಲ ಆಗ್ಲಿ, ನಿಮ್ದೇನು... ನಾಲ್ಕು ಶರ್ಟ್ ತೆಗೆದರಾಯ್ತು" 

"ಓಹ್, ಈ ಕಲರ್ ದು ಎಷ್ಟು ಹುಡುಕಿದ್ವಿ ಗೊತ್ತಾ... ಶಿವಮೊಗ್ಗ ಎಲ್ಲಾ ಹುಡುಕಿದ ಪಾಪ ಹೇಮಂತು. ಅಂಗೈಯಲ್ಲೇ ಇದೇ ನೋಡಿ" ಎಂದಳು ಲತಾ. 

ಲಿಂಗಪ್ಪ "40 ಸೈಜ್ ಇರ್ಬೇಕೇನೋ ಅಲ್ವಾ?"  

"ಹೂ, 40 .... ನೀವು ಒಂದು ಕೆಲಸ ಮಾಡಿ ಅಂಕಲ್. ಹೇಗೂ ಹುಡುಗನಿಗೆ 5 ಜೊತೆ ಬಟ್ಟೆ ಕೊಡಿಸ್ಬೇಕಲ್ಲಾ, ಇದೇ ತರದ್ದು ಲೈಟ್ ಕಲರ್ ಶರ್ಟ್ ತಗೊಳ್ಳಿ. ನಿಮಗೂ ಹುಡುಕೋ ತಾಪತ್ರಯ ಇರಲ್ಲ...." ಎಂದವಳೇ ...."ಇದರಲ್ಲೇ , ಬೇರೆ ಕಲರ್ ಎಲ್ಲಾ ತೋರಿಸಿಬಿಡಪ್ಪಾ...." ಎನ್ನುತ್ತಾ ಗಂಡಸರ ಸೆಕ್ಷನ್ ಕಡೆಗೆ ನಡೆದಳು. 

 

"ಸರಿ, ಆ ಬಸವರಾಜನ ಚಿಂತೆ ಬಿಡು"

"ಇಲ್ವೋ, ನನಗೆ ಅವನೊಟ್ಟಿಗೆ ದಿನಾಲು ಓಡಾಡೋಕೆ ಆಗೋಲ್ಲ, ಮೈ-ಕೈ ಮುಟ್ಟೋಕೆ ಕಾಯ್ತಿರ್ತಾನೆ.... ಹಾಗಂತ ಅಸಹ್ಯವಾಗೂ ನಡ್ಕೊಳಲ್ಲ... ಅದೇನೋ" 

"ನಿಮ್ ಅಮ್ಮನಿಗೆ ಹೇಳಿದ್ರೆ ಆಗೋದು" 

"ಅಪ್ಪ-ಅಮ್ಮನಿಗೆ ನನಗಿಂತಲೂ ಅವನ ಮೇಲೇ ನಂಬಿಕೆ, ಎಲ್ಲಾ ಕೆಲಸಕ್ಕೂ ಅವನೇ ಬೇಕಲ್ಲ ಮನೆಗೆ" 

"ನೀನು ಇವತ್ತು ಸಂಜೆ ಬಸ್ ಗೆ ಹೋಗು, ಕಾಲೇಜು ಬೇಗ ಬಿಡ್ತು ಅಂತ ಹೇಳು" 

"ಸರಿ, ಆದರೆ ನಾಳೆ ಬೆಳಗ್ಗೆ ಅವನೇ ಬರ್ತಾನಲ್ಲ...." 

"ಬಂದಾಗ ನೋಡಿಕೊಳ್ಳೋಣ" 

"ನನ್ನ ಫೋನ್ ಹಾಳಾದಾಗ, ಅದೆಷ್ಟು ಭಯ,ಕೋಪ ಬಂದಿತ್ತು..... ನಿನ್ನ ಮುಖ ನೋಡಬಾರದು ಅಂದುಕೊಂಡಿದ್ದೆ. ಈವಾಗ ನೋಡು ನಿನ್ನದೇ ಸಹಾಯ ಕೇಳ್ತಾ ಇದ್ದೀನಿ" 

"ಸಹಾಯ ಏನು ಮಮ್ಮಿ, ಸ್ವಂತ ಅಪ್ಪ-ಅಮ್ಮನೇ ಆಗದಿರೋವಾಗ ನೀನಾದ್ರೂ ಏನು ಮಾಡ್ತಿಯಾ? ಟೈಮ್ ಆಯ್ತಲ್ಲ ಕ್ಲಾಸ್ ಗೆ, ಈ ಕ್ಲಾಸ್ ಮುಗಿಸಿ ಮನೆಗೆ ಹೊರಡು... ನಾಳೆ ಸಿಗೋಣ" 



ಆ ರಾತ್ರಿ ಲಿಂಗಪ್ಪ ಮನೆಗೆ ಬಂದದ್ದೇ ಪಾರ್ವತಿ ಕೇಳಿದಳು, "ಹೇಗಿದ್ದಾನೆ ರಿ ಬಸವ"  "ಬಲಗಾಲಿನ ಮೂಳೆ ಮುರಿದಿದೆ... ಗಾಡಿ ಇಂದ ಬಿದ್ದೆ ಅಂದ. ಅವನ ಗಾಡಿಗೆ ಏನಾಗಿಲ್ಲ, ಮುಖ-ಕೈ ಗೆ ಎಂತದ್ದೂ ಆಗಿಲ್ಲ, ಬಲಗಾಲು ಮಾತ್ರ ಸೋರೆಕಾಯಿ ತರ ಊದಿದೆ"  "ಶಿವಾ... ಶಿವಾ. ಇವತ್ತು ಮಮತಾಗೆ ಬೇಗ ಕಾಲೇಜು ಮುಗಿದು ಬಸ್ ಗೆ ಬಂದ್ಲು, ಇಲ್ಲಾಂದ್ರೆ ಇವಳಿಗೂ...... ಶಿವ ಕಾಪಾಡಿದ"  "ಹಾಂ, ನಾಳೆ ಇಂದ ಬಸ್ ಗೆ ಓಡಾಡ್ಲಿ.... ಮತ್ತೇ... ಗದ್ದಿಗೆರೆ ಬಸಪ್ಪ ಇದಾರಲ್ಲ"  "ಯಾವ?"  "ಅದೇ ಸಿರಿಗೆರೆ ಮಠಕ್ಕೆ ಹೋದಾಗ ಸಿಕ್ಕಿದ್ರಲ್ಲೇ..."  "ಹೂ..., ಹೂ... ಏನಂತೆ?"  "ಅವ್ರ್ ಮಗ ಇದಾನಂತೆ, ಹೇಮಂತ್ ಅಂತ. ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಲೆಚ್ಚರ್ರು. ಮಮತಾಗೆ ಕೇಳಿದ್ರು"  "ಸಾದ್ರೆ ಅವ್ರು?"  "ಸಾದ್ರಲ್ದೆ ಇನ್ನೇನು? ಸಾಬ್ರ? ನಿನ್ನ ಮಗಳು...." ತನ್ನ ಗಂಡನ ವಾಕ್ಯ ಪೂರ್ಣ ಕೇಳಿ ಅರಗಿಸುವ ಸಂಕಟಬೇಡವೆಂಬಂತೆ ಪಾರ್ವತಿ,  "ಅಲ್ಲಾ ರಿ, ಇದೊಂದು ವರ್ಷಕ್ಕೆ ಡಿಗ್ರಿ ಆಗಿ ಹೋಗೋದು"  "ಡಿಗ್ರಿ ಏನು, ಹುಡುಗನೇ ಮಾಡಿಸ್ತಾನೆ.ಅವ್ನೆ ಲೆಚ್ಚರ್ರು... ಬಂದು ನೋಡಿ ಹೋಗ್ತಿವಿ ಅಂದಾಗ ಬೇಡ ಅನ್ನೋದ? ಭಾನುವಾರ ಬರ್ತಾರಂತೆ, ಬಂದೋಗ್ಲಿ ಬಿಡು".  "ನೀನು ಒಂದು ತಗೋಳಮ್ಮ, ಪಾಪ ನಂಜೊತೆಗೆ ಬಂದು ಎಲ್ಲಾ ತೆಗ್ಸಿ ಕೊಟ್ಟಿದಿಯ.." ಆಪ್ತತೆ ಇಂದ ಪಾರ್ವತಿ ಎಂದಳು. "ಅಯ್ಯೋ,ಮನೇಲಿ ಇರೋ ಸೀರೆಗಳನ್ನೇ ಉಡೋಕೆ ಪುರ್ಸೋತಿಲ್ಲ ಆಂಟಿ, ದಾವಣಗೆರೆ ಹೋದಾಗೆಲ್ಲಾ ತರೋದು" ಲತಾ ಕಣ್ಣಗಳಿಸಿಯೇ ನಿರಾಕರಿಸಿದಳು.  "ಅದು ಹಳದಿ-ಕೆಂಪನದು ಇಷ್ಟ ಆಯ್ತು ಅಂದಿಯಲ್ಲ, ಅದನ್ನೇ ತಗೋಳಮ್ಮ"  "ಇಷ್ಟ ಏನು ಆಂಟಿ....ಅಂದ್ರೇ.....ಆ ಕಲರ್ ಮಿಕ್ಸ್ ಜಾಸ್ತಿ ಸಿಗಲ್ಲ, ಅದಕ್ಕೆ ಮಮತಾಗೆ ತಗೋ ಅಂದೇ. ಅವಳದ್ದು ಸ್ವಲ್ಪ ಕಲರ್ ಡಿಮ್ ಅಲ್ವಾ, ಯಲ್ಲೋ ಕಲರ್ ರಾಡಿ-ರಾಡಿ ಕಾಣುತ್ತೆ"  "ಅದೇ, ನೋಡು...ನಿಂಗೆ ಒಪ್ಪುತ್ತೆ ಇದು ಕಲರ್"  "ಏನೋ, ನೋಡಿ ಆಂಟಿ ... ಬಾರ್ಡರ್ ಜಾಸ್ತಿ ಅನ್ಸಲ್ಲ ತಾನೇ" ಎನ್ನುತ್ತಾ ಸೀರೆಯನ್ನ ಹೆಗಲ ಮೇಲೆ ಏರಿಸಿ ನಿಂತಳು.  "ಯಾಕೋ ಲೇಟ್" "ಯಾಕೂ ಇಲ್ಲಾ"  "ಒಂದಾದರ ಮೇಲೊಂದು ಕಷ್ಟ ನನಗೆ"  "ಇವಾಗೇನಾಯ್ತು, ಹೋದ್ನ ನಿಮ್ ಅಪ್ಪ?"  "ಥು loafer.. ಮದ್ವೆಗೆ ಗಂಡು ನೋಡೋಕೆ ಬರ್ತಾರೆ ಭಾನುವಾರ"  "ಆ ಬಸಣ್ಣ ನ ನೆಟ್ಟುಗೆ ಮಾಡಿಯಾಯ್ತು, ಈವಾಗ ಇದು"  "ಅಂದ್ರೇ? ಬೈಕ್ ಇಂದ ಬಿದ್ದು ಕಾಲು ಮುರಿದದ್ದಲ್ಲ.... ನೀನೆ ಆಕ್ಸಿಡೆಂಟ್ ಮಾಡಿದ್ಯೇನೋ? ದೇವ್ರೇ ..." "ಆಕ್ಸಿಡೆಂಟು? ಹಾಗಂತ ಹೇಳಿದ್ನ ಆ ನಾಯಿ" "ಅಪ್ಪ ಹಾಗಂದ್ರು" "ಹಾಗೆ ಅಂದುಕೋ, ಮದ್ವೆ ವಿಷಯ ಏನಿವಾಗ? ಒಪ್ಕೋತೀಯ?" "ಇಲ್ಲಾ.." "ಯಾಕೆ?"  "ಸುಮ್ನೆ"  "ಚನ್ನಗಿರಿನೇ ವಾಸಿ ಆಂಟಿ, ದಾವಣಗೆರೆಲಿ ಎಷ್ಟು ರೇಟ್ ಅಂತೀರಾ" "ಹೌದಾ, ಏನೋಪ್ಪ ನಾವು ಇಲ್ಲೇ ತಗೋಳೋದು... ಎಲ್ಲಾ ಪರಿಚಯಸ್ತ ಅಂಗಡಿಗಳು ನಮಗೆ " ಹೆಂಗಸರ ಮಾತು ಮುಂದುವರಿದಿರೆ, ಬಂಡೇ ಸಾಮಾನಿನ ಅಂಗಡಿ ಎದುರಾಯ್ತು.  "ಐದಾಯ್ತಾ ಟೈಮು" ಮಮತಾ ಕೇಳಿದಳು. "ಐದು ಕಾಲು" ಲಿಂಗಪ್ಪನೆಂದ. "ಪಾತ್ರೆಗಳೆಲ್ಲ ನನಗೆ ಗೊತ್ತಾಗಲ್ಲ, ನೀವೇ ತೆಗೆಸಿ" ತನ್ನ ಪರಿಣತಿಯನ್ನೆಲ್ಲಾ ಬಂಗಾರ-ಬಟ್ಟೆಗೆ ಕ್ರಯಿಸಿದ ಲತಾ ಅಂಗಡಿಯ ಮುಂದಿನ ಖುರ್ಚಿಯೊಂದನ್ನ ಎಳೆದು ಕುಳಿತಳು. ಐದಾರು ನಿಮಿಷ ಕಳೆದಿರೆ, ಅಡಕೆ ಹೊತ್ತೊಯ್ಯುವ ಟಿಪ್ಪರಿನಂತೆ 'ಪಿಟಾರ್...ಪಿಟ್..ಪಿಟ್' ಸದ್ದು ಮಾಡುತ್ತಾ ಬೈಕ್ ಒಂದು ಅಂಗಡಿಯ ಮುಂದೆ ಬಂದು ನಿಂತಿತು. ಬೈಕಿನ ಕ್ಷೀಣ ಪರಿಚಯವಿರುವಂತೆ ಲಿಂಗಪ್ಪ ಅದರೆಡೆ ನೋಡಿದ. ಬೈಕ್ ಓಡಿಸುವವನ ಸಂಪೂರ್ಣ ಪರಿಚಯ ಇರುವಂತೆ ಲತಾ,ಎರಡು ಸಾರಿ ಚಪ್ಪಾಳೆ ಹೊಡೆದಳು.ಕೆಂಪು ಬೈಕ್ ಸವಾರ, ಹಸುರು ಬಣ್ಣದ ಹೆಲ್ಮೆಟ್ ನ ಎಡ ಕೈ ಗೆ ಏರಿಸಿದ್ದ. "ಸಂದೀಪ, ಬಾರೋ .... ಅಕ್ಕಾ ಹೇಗಿದಾಳೊ? " ಲತಾ ಹುಡುಗನನ್ನ ಕೇಳಿದಳು.  ಆವಾ, ಇವಳತ್ತ ತಿರುಗಿ ಪರಿಚಯದ ನಿಶಾನೆಯಂತೆ ತಲೆಯಾಡಿಸಿದ.  "ಸಂದೀಪ ನ? ಯಾರು?" ಲಿಂಗಪ್ಪ ಕೇಳಿದ. "ಮಾವಿನಕಟ್ಟೆ ಅಯ್ಯ್ನೊರಿಲ್ವಾ? ಅವರ ಮಗ" "ಅಯ್ಯ್ನೋರ ಹುಡುಗನ?"  "ಹೂ .... ವೇಷ ಮಾತ್ರ ಹಂಗೆ, ವಿಚಿತ್ರ....... ಬಾ ಅಂದ್ರೂ ಬೈಕ್ ಇಂದ ಇಳಿದಿಲ್ಲ ನೋಡಿ". "ಹುಷಾರಮ್ಮ...." ತಾಯಿಯ ಮುಖ ನೋಡಲೂ ಆಗದ ಮಮತಾಳಿಗೆ ರಕ್ತ ಒತ್ತರಿಸಿ ಗಂಟಲು ಹರಿದಂತಾಯ್ತು.  ಸಂದೀಪಾ ಬೈಕ್ ನ ಕಿಕ್ಕರ್ ತುಳಿದ. ಅದು 'ಪಿಟ್ ಪಿಟ್ ...ಪಿಟಾರ್' ಎಂದು ಸದ್ದು ಮಾಡುತ್ತಾ ಹೊಗೆಯಾಡಿತು.  ಲತಾ ಲಿಂಗಪ್ಪನತ್ತಲೂ,ಪಾರ್ವತಿಯತ್ತಲೂ ತಿರುಗಿ ಕೇಳಿದಳು "ಅರೇ, ಮಮತಾ ಇವನ ಜೊತೆಗೆಲ್ಲಿ ಹೊರಟಳು?".
0
Reading under T&C