Kannada · Fiction

ಒಂದೇ ಕೂಗು!

Writer DP! Preetham Pais 16 Jan 17 27 Views

                                                                                                          ೧ 
ಮಮತಾಗೆ ಈಗ್ಗೆ ಐದಾರು ವರ್ಷವಾಯ್ತೆನೋ ಲಾರಿ ಡ್ರೈವರ್ ಪುಟ್ಟಪ್ಪನ ಪಂಚೆ ಹಿಡಿದು.ಇನ್ನೂ ಮನೆಯಲ್ಲಿ ಹೇಲು, ಉಚ್ಚೆ ವಾಸನೆ ಬರುವ ಲಕ್ಷಣ ಕಾಣುತ್ತಿದಿಲ್ಲ.ಮಾರಿಗೆ ಖಾರ ಅರೆದರೂ, ನಾಟಿ ವೈಧ್ಯನ ಕಡುಕಹಿಯ ಕಷಾಯ ಕುಡಿದರೂ, ನವಿಲುಗರಿ , ಮಾವು-ಬೇವಿನ ವಧೆ ತಿಂದರೂ.... ಊಹೂ ಯಾವ ಪ್ರಯೋಜನವೂ ಆಗಲಿಲ್ಲ.ಪುಟ್ಟಪ್ಪನಿಗೆ ಮಾತ್ರ ಕಾದು ಕೆಂಡವಾದ ಕ್ಯಾಬಿನ್ ನ  ಬಳಿ ಕುಳಿತು ಲಾರಿ ಓಡಿಸಿ  ಓಡಿಸಿ, ಕುಂಡೇಯಲ್ಲಿದ್ದ  ಪಾವು  ಮಾಂಸ ಕರಗಿ ಹೋಗಿತ್ತು .ಕೋರ್ಟ್ ನಿಂದ  ಮೈನಿಂಗ್ ಲೈಸನ್ಸ್ ರದ್ದಾಗಿ ದಾವೆಯನ್ನ ಸುಪ್ರೀಂ ಕೋರ್ಟ್ನಲ್ಲಿ ಹೂಡಿದ್ದರಿಂದ ಸಧ್ಯಕ್ಕೆ ಲಾರಿ ಕೆಲಸವೂ ಇಲ್ಲದ ಪುಟ್ಟಪ್ಪ, ಕಾಡು ಹರಟೆ , ಕುಡಿಯುವುದರಲ್ಲೇ ಸಮಯ ಕಳೆಯತೊಡಗಿದ. ಪುಟ್ಟಪ್ಪನ  ಲಾರಿಗೆ ಅಂತ ಒಬ್ಬ ಕ್ಲೀನರ್ ಕೊಟ್ಟಿದ್ದರು ."ಮೊಮ್ಮದ್ " ಅಂತಲೇ ಎಲ್ಲರೂ ಕರೆವುದು.ಪೂರ್ತಿ ಹೆಸರು ಅವನಿಗೂ ಮರೆತು ಹೋಗಿದ್ದಿರಬೇಕು. ಈ ಮೈನಿಂಗ್ ಪ್ರಹಸನದಿಂದ ಕೆಲಸ ಕಳೆದುಕೊಂಡ ಮೊಮ್ಮದ್  ಪುಟ್ಟಪ್ಪನ ಮನೆ ಹೊಕ್ಕ.ಮನೆಯ ಆಚೆ, ಬಾಗಿಲ ಬಲಕ್ಕೆ ಜಾಗ ಕುದುರಿಸಿ ನೆಲೆಸಿದ.


                                                                                                           ೨ 


ಸಂಸಾರದ ಗುಟ್ಟು ಹಿಡಿದಿಡುವ ಹೊಣೆ ಹೆಣ್ಣುಮಕ್ಕಳಿಗೆ ಮಾತ್ರ. ಬಾರ್ ನಲ್ಲಿ ಕುಳಿತ ಪುಟ್ಟಪ್ಪ ಶುರುವಿಟ್ಟ ,
" ಈ ಜಲ್ಮಾಕ್ಕೆ ಮಕ್ಳಗೋವಲ್ದು ನಂಗೆ". 
"ಮಾಮು , ಹಂಗೆ ಬೇಜಾರ್ ಗೆ  ಆದ್ರೆ ಮಕ್ಲಾಗತ್ತೆ?" ಮೊಮ್ಮದ್ ಕೇಳಿದ. 
"ನಿಂಗೆ ಗೊತ್ತಾಗಲ್ಲ, ಮೋಸ ಅಗೋಯ್ತೋ ನಂಗೆ, ಭಾರಿ ಮೋಸ! ". 
ಅಲ್ಲಿದ್ದ ಕುಡುಕ ಮಹಾಶಯರೆಲ್ಲ ಸಂತಾಪ ಸೂಚಿಸುತ್ತ ," ಪೆಟ್ಟು ಕಮ್ಮಿ ಆದ್ರೆ ಹೀಗೆ, ಸರಿಯಾಗಿ ಬೀಳ್ಬೇಕು!" .
"ಡಾಕ್ಟ್ರಿಲ್ವೇ? ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಹೋಗಯ್ಯಾ", 
"ಯಾವ್ ಆಸ್ಪತ್ರೆ ? ಸುಮ್ನೆ ಖರ್ಚು, ದಿನಾಗ್ಲೂ ಖರ್ಜೂರ ತಿನ್ಬೇಕು",
 "ಖರ್ಜೂರ ಅಲ್ಲಲ್ಲೇ , ಒಳ್ಳೆ ಬನ್ನೂರ್ ಕುರಿದು ಖಲೀಜಾ ಫ್ರೈ ತಿನ್ಬೇಕು , ಅದೇ ಒಳ್ಳೆ ಅವ್ಸ್ಡಿ"....... 
ಇಷ್ಟೆಲ್ಲಾ ಸಲಹೆ ಸೂಚನೆ ಕೇಳಿದ ಪುಟ್ಟಪ್ಪ ಭಾರೀ ಸಂತಸದಿಂದ, ಏನನ್ನೋ ಸಾಧಿಸಬೇಕೆಂಬ ಉತ್ಸಾಹದಿಂದ ಮನೆ ದಾರಿ ಹಿಡಿದು, ಕುಡಿದ ಅಮಲಿನಲ್ಲಿ , ಮನೆಯ ಹೊರಗೆ  ಮೊಮ್ಮದ್ ಒಟ್ಟಿಗೆ ತೊಡೆಆನಿಸಿ ಮಲಗಿದ!


                                                                                                            ೩


"ಕೆಲವರಿಗೆ, ಒಂಬತ್ತು ತುಂಬುವ ಮೊದಲೇ ಹೆರಿಗೆ ಆಗೋದುಂಟು"
"ಅಮ್ಮಾ.... ಸಾಯಿಸ್ತಿರೇನು ನಂಗೆ"!!
"ತಡ್ಕೊಳವ್ವ, ಬಂದೆ ಬಿಡ್ತಲ್ಲ ಆಸ್ಪತ್ರೆ"
ಈ ಎಲ್ಲ ಕೂಗು, ಘಾಬರಿ ಪುಟ್ಟಪ್ಪನಿಗೆ ಘಂಟೆನಾದದಂತಿತ್ತು. ಹೊಸ ಜೀವವನ್ನ ಸ್ವಾಗತಿಸಲು ಎಲ್ಲರ ಮನಸ್ಸುಗಳು ಬಹಳ ವರ್ಷದಿಂದ ಕಾದಿದ್ದವು."ಲೋ!, ಇವನಿಂದಾದೀತಾ? ಆ ಹೆಣ್ಣನ್ನ ಇವನೇ ನಿಭಾಯಿಸಿಲ್ಲ" ಅಂದವರಿಗೆಲ್ಲ ಉತ್ತರವಾಗಿ ಬರಲಿದ್ದ ಈ ಮಗುವನ್ನ ಕಾತರದಿಂದ ಪುಟ್ಟಪ್ಪ ಎದುರು ನೋಡುತಿದ್ದ.ಜೀವ ಸಂಕುಲದ ಕಠಿಣಾತೀತ ಸಂಕೋಲೆಗಳಿಂದ ಮುಕ್ತವಾಗಿ, ಹೊಸಲೋಕದ ಚಳಿ ಮೈ ಸೋಂಕಿದ್ದೆ, ಆ ಮಗು ಕಿಟಾರನೆ ಕಿರುಚಿತು. ಮಗುವಿನ ಕೂಗು ಪುಟ್ಟಪ್ಪನನ್ನ  ರೋಮಾಂಚನಗೊಳಿಸಿತು, ಬನ್ನೂರು ಕುರಿಯ ಖಲೀಜಾ ವ್ಯರ್ಥವಾಗಲಿಲ್ಲ ಅಂದುಕೊಂಡ!. ಜೀವ ಸೋತು ಅರ್ಧ ಎವೆ ಮುಚ್ಚಿದ್ದ ಮಮತಾಳಿಗೆ  ಅದೇ ಕೂಗು "ಅಮ್ಮಾ ..." ಅಂದಂತೆ ಕೇಳಿ ಮನ ಪ್ರಫುಲ್ಲವಾಯಿತು. ಪುಟ್ಟಪ್ಪನೊಟ್ಟಿಗೆ ನಿಂತಿದ್ದ ಮೊಮ್ಮದ್ ಗೆ ಮಗು , ಒಮ್ಮೆ "ಅಲ್ಲಾ !" ಅಂತಲೂ ಮಗದೊಮ್ಮೆ"ಅಬ್ಬಾ!" ಅಂತಲೂ ಕೂಗಿದಂತಾಗಿ ಕಣ್ಣಂಚು ಮಿನುಗಿತ್ತು. 

1
Reading under T&C