Kannada · Fiction

ಕೊಳ್ಳಿ ಕ್ಯಾತನೂರು

Writer DP! Preetham Pais 07 Aug 18 45 Views
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ  ಹರಿಹರಪುರದಿಂದ ಪೂರ್ವಾಭಿಮುಖ ಹೊರಟರೆ ನಾಗಲಾಪುರ ಸಿಗುತ್ತದೆ. ತುಂಗಾ ನದಿ ಹರಿವಿಗೆ ಅಡ್ಡಲಾಗಿ ಕಟ್ಟಿರುವ ಆ ಊರಿನ ಸೇತುವೆ ದಾಟಿ ಬಲಕ್ಕೆ ಅಂದರೆ ದಕ್ಷಿಣಕ್ಕೆ ಹೊರಳಿದರೆ ನಾರ್ವೆ ಎಂಬ ಊರಿನ ದಾರಿ ಕಾಣುತ್ತದೆ. ತುಂಗೆಯ ಪಾರ್ಶ್ವಕ್ಕೆ ಸರಿಸಮಾನ ಓಡುವ ಈ ರಸ್ತೆ ಒಂದೊಮ್ಮೆ ವಿಶ್ವಸಂಸ್ಥೆಯ ಗಮನ ತನ್ನತ್ತ ಸೆಳೆದಿತ್ತು ಎಂದರೆ ನಂಬಲೇಬೇಕು. ಮಾತು ಇಂದಿನದ್ದಲ್ಲ, ಸುಮಾರು 1970 ರ ಆಸುಪಾಸಿನದು. ಮೇಲ್ತಿಳಿಸಿದ ರಸ್ತೆಯ ಎಡಕ್ಕೊಂದು ಊರು , ಹೆಸರು ಕ್ಯಾತನೂರು. ಯಾವುದೇ ಕ್ಯಾತೆಯಿಲ್ಲದೆ ಜನ ತಮ್ಮ ತಮ್ಮ  ಕೈಂಕರ್ಯದಲ್ಲಿ ತೊಡಗಿದ್ದರು. ಊರ ದೊಡ್ಡಮನೆ ಬಂಡೆಪ್ಪನವರದ್ದು, ಯಾವುದೊ ಕಾಲಕ್ಕೆ ಉತ್ತರ ಕರ್ನಾಟಕದಿಂದ ಬಂದ ಈ ಕುಟುಂಬ ಕಾಡು ಸವರಿ ಮಾಡಿದ್ದ ಅಡಕೆ ತೋಟ, ಗದ್ದೆಯ ವಾರಸುದಾರರು. ಜನವೆಲ್ಲ ಇವರ ಮನೆದಾಟಿಯೇ ಊರ ಒಳ ಹೊಕ್ಕಬೇಕಿತ್ತು. ಹೀಗಿದ್ದ ಕಾಲಕ್ಕೆ ಕ್ಯಾತನೂರಿಗೆ, ಕ್ಯಾತೆಯೊಂದರ ಜರೂರತ್ ಇತ್ತು, ಎಂತಲೇ.....


"ಈ ಮಾರಿಯನ್ನ ಎಲ್ಲಿ ಕಟ್ಟಿಕೊಂಡು ಬಂದ್ಯೋ?" ಬಂಡೆಪ್ಪ ತನ್ನ ಮಗ ಹನುಮನನ್ನ ದುರುಗುಟ್ಟುತ್ತ ನುಡಿದ.
"ಈ ಹೆಣ್ಣಿಗೊಂದು, ಇಲ್ಲದ ರೋಗ, ಯಾವಾಗಲು ಮೂಲೆ ಹಿಡಿದು ಕೂರುತ್ತೆ" ಎಂದವನೇ ಮನೆ ಹೊರಗೆ ಅಡಿಕೆ ಗಿಡಕ್ಕೆ ಬಾಯಿ ಕಳೆದು ಕಕ್ಕುತಿದ್ದ ಹೆಂಡತಿಯ ತಲೆಗೊಂದು ಮೊಟಕಿದ.
"ನಾ ಹೇಳಿದೆ, ದೂರದ ಊರಿನ ಹೆಣ್ಣು ಬೇಡ ಅಂತ, ಕೇಳಿದ್ಯಾ? ಅವರಪ್ಪನಿಗೆ ಕಾಗದ ಬರೆದು ಹಾಕು, ರೋಗ ಕಳೆದು ಗುಣ ಆದಳೋ? ತಂದು ಬಿಡಲಿ, ಇಲ್ಲಾಂದ್ರೆ ಅವನೇ ಸಾಕಿಕೊಳ್ಳಲಿ!" ಬಂಡೆಪ್ಪ ಇದಿಷ್ಟನ್ನ ಹೇಳುತ್ತಲೇ, ಬಾಯಿಗೊಂದಷ್ಟು ಅಡಕೆ ಸುರಿದು ಮನೆಯಿಂದ ಹೊರಟ.
"ಕೇಳಿದ್ಯೇನೇ? ಈವತ್ತೇ ಕಾಗದ ಬರೆದು ಹಾಕು, ಮನೆ ತುಂಬಾ ಕೆಮ್ಮಿ ಅಸಹ್ಯ ಹುಟ್ಟಿಸ್ತಿಯಲ್ಲ, ಕಾಗದದ ಮೇಲೊಂದಿಷ್ಟು ಕಫ ಸುರಿದು ಕಳಿಸು" ಹನುಮನೂ ತಂದೆಯಂತೆ ಊರ ಹಾದಿ ಹಿಡಿದ.


ಈಕೆ..., ಈಕೆಯ ಹೆಸರೇಕೆ? ಆಪ್ರಸ್ತುತ! ಹನುಮನ ಹೆಂಡತಿಯೆಂದರೆ ಸಾಕು! ತನ್ನ ತಂದೆಗೆ ತುರ್ತಾಗಿ ಬರಬೇಕೆಂದು ಪತ್ರ ಬರೆದಳು. ಉಸಿರು ಕಟ್ಟಿ ಹೊರಬರುತ್ತಿದ್ದ ಕೆಮ್ಮು ಆಗೀಗೊಮ್ಮೆ ರಕ್ತವನ್ನೂ ಹೊರಚೆಲ್ಲುತ್ತಿತ್ತು. ಬಾಯಿ ತೆರೆದರೆ ಅಸಾಧ್ಯ ವಾಸನೆ. ಕೆಮ್ಮಿ,ಕ್ಯಾಕರಿಸಿ ಎದೆ ಹಿಡಿದು ಕೂತರೆ ಯಾವ ಕೆಲಸ ಮಾಡಲೂ ಶಕ್ತಿ ಸಾಲದು. ಕ್ಷಯ ಇರಬಹುದೇನೋ ಅಂದರು ಡಾಕ್ಟ್ರು. ಅದಕ್ಕೂ ಚಿಕಿತ್ಸೆ ಮುಂದುವರೆದಿದೆ, ಆದರೂ ಫಲಿತಾಂಶ ಶೂನ್ಯ. ಹೀಗಿರೆ, ಒಂದು ದಿನ ಬಾವಿ ಕಟ್ಟೆಯ ಬಳಿ ಕೆಮ್ಮಿ, ಕಕ್ಕಿ ಉಸಿರು ಕಳೆದು ಬಿದ್ದ ಈಕೆ, ಮತ್ತೆಂದೂ ಏಳಲೇ ಇಲ್ಲ. ಬಾಯಿಂದ ಒಸರುತ್ತಿದ್ದ ರಕ್ತ ಕಂಡ ಜನವೆಲ್ಲ ಹೌಹಾರಿದ್ದರು. ಶವ ಸಂಸ್ಕಾರದ ವಿಧಿ ವಿಧಾನ ನೆರವೇರಿಸಲು ಭಯ ಪಡುವಂತೆ ಈಕೆಯ ಚರ್ಮವೆಲ್ಲ ಬಿಳುಪಿಟ್ಟಿತ್ತು. ಮನೆಯಾಚೆಯ ತೋಟದಲ್ಲೇ ಧಫನ್ ಮಾಡಿ ಕಾರ್ಯ ಮುಗಿಸಿದ ಬಂಡೆಪ್ಪ.


ಸಮಸ್ಯೆ ಶುರುವಾದ್ದೇ ಇಲ್ಲಿಂದ. ಆಕೆಯ ಬಿಳಿಚಿದ ಮುಖ ಕಂಡ ಜನ ಗುಸು-ಪಿಸು ಮಾತಾಡಹತ್ತಿದರು. ಸಿರಿವಂತರ ಮನೆಯ ಸುದ್ದಿಯಾದ್ದರಿಂದ ಊರಿನ ನಾಯಿ-ನರಿಗಳಿಗೂ ಇದರ ಬಗ್ಗೆ ಆಸಕ್ತಿ. ಹೆಣ್ಣು ದಿಕ್ಕಿಲ್ಲದ ಬಂಡೆಪ್ಪನ ಮನೆ ಸ್ಮಶಾನದಂತಾಗಿತ್ತು. ಇವರ ಮನೆಗೆ ಕೆಲಸಕ್ಕೆ ಬಂದಿದ್ದ ಆಳು , ನಾಯಿಯೊಂದು ಹನುಮನ ಹೆಂಡತಿಯ ಸಮಾಧಿಯೆಡೆ ಮುಖ ಮಾಡಿ ಊಳಿಡುತ್ತಿರುವುದ ಕಂಡ. ಹೇಗೋ ಧೈರ್ಯ ಸಾಧಿಸಿ, ಒಂದೊಂದೇ ಹೆಜ್ಜೆ ಮುಂದಿಡುತ್ತಾ ನಾಯಿಯ ಹಿಂದೆ ಸಾಗಿದ. ಅದರ ವಿಕಾರ ಊಳನ್ನ ನಿಲ್ಲಿಸಲು, ಕಲ್ಲು ಹಿಡಿದು ಎಸೆಯುವುದರಲ್ಲಿದ್ದ, ಅಷ್ಟರಲ್ಲಿ ಫಕ್ಕನೆ ಇವನೆಡೆಗೆ ತಿರುಗಿದ ನಾಯಿ!, ಚಿರತೆಯೇನೋ ಎಂಬಂತೆ ಇವನೆಡೆ ತಿರುಗಿ ಹಲ್ಲು ಮಸೆಯಿತು. ಮೈ ರೋಮವೆಲ್ಲ ಸೆಟೆದು, ಕಾಲಿನ ಬಲ ಉಡುಗಿ ಹಿಮ್ಮುಖ ಓಡಬಯಸಿದ್ದವ ನೆಲಕ್ಕೆ ಬಿದ್ದ, ಕುಂಡೆಯನ್ನೇ ಉಜ್ಜುತ್ತಾ ಹಿಂದೆ-ಹಿಂದೆ ಸರಿಯ ಹತ್ತಿದ. ರಕ್ಷಣಾ ತಂತ್ರವಾಗಿ ಕೈಯಲ್ಲಿದ್ದ ಕಲ್ಲನ್ನ ಎಸೆದ. ಆ ಕಲ್ಲು ದಿಕ್ಕತೋಚದೆ ಎಲ್ಲಿಗೋ ಹೊರಳಿ, ಮತ್ತೆಲ್ಲೋ ನುಗ್ಗಿ , ಹನುಮನ ಹೆಂಡತಿಯ ಸಮಾಧಿ ಬುಡ ತಲುಪಿತು. ರೇಜಿಗೆಯಿಂದ ಆ ನಾಯಿ ಇವನೆಡೆ ಓಡುತ್ತಾ, ನೆಲದಮೇಲಿದ್ದ ಇವನ ತೊಡೆಯಮೇಲೆ ನಿಂತು ಇವನ್ನ ಕಣ್ಣನ್ನೇ ಪರಚಿ ಓಡಿ ಹೋಯ್ತು. ಅಸಾಧ್ಯ ನೋವಿನಿಂದ ಕಿರುಚಿದ ಇವನನ್ನ ಆಸ್ಪತ್ರೆಗೆ ಸೇರಿಸುವ ಕಾಲಕ್ಕೆ ಕಣ್ಣಿನಿಂದ ಧಾರಾಕಾರ ರಕ್ತ ಸುರಿದು, ಅದಕ್ಕೆ ಊರವರೇ ಹಚ್ಚಿದ ಅರಿಶಿನ , ಚಹಾ ಪುಡಿಯ ಸೋಂಕಿಗೆ ಬಲಗಣ್ಣು ಎಂದೂ ಕಾಣದಂತಾಯ್ತು.


ಮೇಲಿನ ಘಟನೆ ಘಟಿಸಿ ಕೆಲವು ದಿನ ಕಳೆದಿರಬೇಕು, ಕಣ್ಣು ಕಳೆದುಕೊಂಡ ಆಳು, ಹನುಮನ ಹೆಂಡತಿಯಂತೆ ಕೆಮ್ಮಿ-ಕೆಮ್ಮಿ ರಕ್ತ ಸುರಿಸಿ ಸತ್ತ. ಈಗ ಊರವರ ಸಂಶಯ ರೆಕ್ಕೆ ಪಡೆದ ಮರಿ ಹಕ್ಕಿಯಂತೆ ಮನಬಂದಂತೆ ಹಾರತೊಡಗಿತು. ಇದು ಊರ ಮಾರಿಯ ಶಾಪವೆಂತಲೂ, ಎರಡು ವರ್ಷದಿಂದ ಮಳೆ ಇಲ್ಲದೆ, ಉರಿ ಬಿಸಿಲಿಗೆ ಬೆಳೆ ಹಾಳಾಗಿದ್ದಕ್ಕೂ, ಈ ರೀತಿ ಎರಡು ಸಾವು ಸಂಭವಿಸಿದ್ದಕ್ಕೂ ತಾಳೆ ಹಿಡಿದರು. ಬಂಡೆಪ್ಪ ಮಗನ ಎರಡನೇ ಮದುವೆಯ ಕನಸು ಬಿಟ್ಟು, ಹೊಳೆನರಸೀಪುರದಿಂದ ದಿಗ್ಬಂಧನ  ಪೂಜೆ ಮಾಡಿಸಲು ಜನ ಕರೆದು ತಂದ. ತನ್ನ ಸೊಸೆ ಸಮಾಧಿಯ ಬಳಿ ಬೇಲಿ ಹಾಕಿಸಿ, ಹಳದಿ-ಕೆಂಪು-ಕಪ್ಪು ಬಣ್ಣದ ತಾಯತವನ್ನೆಲ್ಲ ಕಟ್ಟಿ ಅದರಾಚೆ ಕಳ್ಳು-ಕಂಟಿಯ ಒಡ್ಡಿ ಅದನ್ನ ಅಕ್ಷರಶ ಮನುಷ್ಯ ಸುಳಿಯದ ಸ್ಥಳವಾಗಿಸಿದ.
ಇದೆಲ್ಲ ಆಗಿ ಹಲವು ವರ್ಷ ಕಳೆದವು. ಜನ ಮಾನಸ ಕ್ಷಣಿಕ, ಅದರಂತೆ ಎಲ್ಲರೂ ಇದನ್ನ ಮರೆತು ತಮ್ಮ ಕೆಲಸದಲ್ಲಿ ನಿರತರಾದರು.


ಇಸವಿ 1983 , ಕರ್ನಾಟಕ ಮಳೆಯಿಲ್ಲದೆ ಭೀಕರ ಬರಕ್ಕೆ ತುತ್ತಾಗಿತ್ತು. ನೀರಿನ ಬರ ತುಂಗೆಗೂ ತಗುಲಿ ಕ್ಯಾತನೂರನ್ನು ಹೊಕ್ಕಿತ್ತು. ಸುಡು ಬಿಸಿಲು ಮಲೆನಾಡಾದ ಈ ಊರನ್ನ ಮರುಭೂಮಿಯನ್ನಾಗಿಸಿತ್ತು. ಹನುಮ ಎರಡನೇ ಮದುವೆಯಾಗಿ, ಅವಳೊಂದು ಹೆಣ್ಣು ಮಗುವನ್ನ ಹೊತ್ತು-ಹೆತ್ತು , ಆ ಮಗು ತುಂಗಾಗೆ ಈಗ ಹತ್ತು ವರುಷವಾಗಿತ್ತು. ಬಿಸಿಲ ಝಳಕ್ಕೆ ಮನೆ,ಕಾಡು, ಊರನ್ನೆಲ್ಲ ತಿರುಗುವ ಈ ಚೂಟಿ ಹುಡುಗಿಯ ಮೈ ಮೇಲೆ ಬೊಕ್ಕೆಗಳಾದವು. ಅದೇನು ಹೊಸದಲ್ಲ, ಮೈ ಮೇಲೆ ಅಮ್ಮ ಬರುವುದು ಸಾಮಾನ್ಯ. ಅಂತಲೇ, ತುಂಗಾಗೆ ಬೇವಿನ ಸೊಪ್ಪಿನ ಕಷಾಯ, ಅದರಲ್ಲೇ ಸ್ನಾನ, ಅದರ ಮೇಲೆಯೇ ನಿದ್ರೆ.ಮೈ ಮೇಲಿನ ಅಮ್ಮ ಸಂಪನ್ನಳಾಗಿ ಇಳಿವುದು 5 ರಿಂದ 9 ದಿನಕ್ಕೆ. ಅಮ್ಮನಿಗೆ ಮೈ ಹಿಡಿಸಿತೋ ಹೆಚ್ಚು ದಿನ ನೆಲೆಸಿಯಾಳು. ಈ ಹುಡುಗಿಯ ದೇಹ ಅಮ್ಮನಿಗೆ ಹಿಡಿಸಿರೆ, ಜ್ವರ ಬಿಟ್ಟು ಹೋಗುವ ಲಕ್ಷಣ ಕಾಣಲಿಲ್ಲ. ಅಮ್ಮನ ಪೂಜೆಗೆ ನಾಗಲಾಪುರದ, ನಾಗ ದೇವರ ಅರ್ಚಕ ಬಂದು ಪೂಜೆಯನ್ನೂ ಮಾಡಿದ. ಜ್ವರ ಇಳಿವ ಲಕ್ಷಣ ಕಂಡಿದ್ದಿಲ್ಲ. ಮೈ ಮೇಲಿನ ಬೊಕ್ಕೆಗಳು ಕೀವು ಹರಿಸಲು, ಹುಡುಗಿ ಒಂದೇ ಸಮನೆ ಜಾವ-ರಾತ್ರಿಯ ಪರಿವೆಯಿಲ್ಲದೆ ಕೆಮ್ಮ ಹತ್ತಿದಳು. ಚಿಕ್ಕಮಗಳೂರಿಗೆ ಕೊಂಡೊಯ್ದ ಹನುಮ, ಹುಡುಗಿಯ ರಕ್ತ -ಮೂತ್ರ ಪರೀಕ್ಷೆ ನಡೆಸಿದ್ದೆ ಆಯ್ತು, ಹೆಣ್ಣು ಬದುಕದೆ ಮೈ ಮೇಲಿನ ಅಮ್ಮನ ಸಮೇತ ಅಸುನೀಗಿತು.
ಇತ್ತ ರಕ್ತದ ಮಾದರಿ ಸಂಗ್ರಹಿಸಿದ ಆಸ್ಪತ್ರೆಯವರು, ಹೆಚ್ಚಿನ ಪರೀಕ್ಷೆಗೆ ಅದನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಸಿದರು, ಅವರು ಅದನ್ನ ಹೈದೆರಾಬಾದ್ ಗೂ , ಅದು ಅಲ್ಲಿಂದ ಡೆಲ್ಲಿಯ AIIMS ತಲುಪಿ ಕಣ್ಮರೆಯಾಯ್ತು.


ತನ್ನ ಮನೆಯಲ್ಲಿ ಎರಡು  ಹೆಣ್ಣು ಒಂದೇ ರೀತಿ ಸತ್ತದನ್ನ ಕಂಡು ಬಂಡೆಪ್ಪ ಹಾಗೂ ಅವನ ಕುಟುಂಬ ಅಧುರಿ ಹೋಯ್ತು. ಆ ಮಾರಿ ತಾನೂ  ಸತ್ತು, ತನ್ನ ಸವತಿ ಮಗುವನ್ನೂ ನುಂಗಿತೆಂದೂ, ಇನ್ನು ಇಲ್ಲಿದ್ದರೆ ಎಲ್ಲರೂ ಕೆಮ್ಮಿ-ರಕ್ತ ಹರಿಸಿ ಸಾಯಬೇಕೆಂದು ಊರನ್ನೇ ಬಿಟ್ಟು, ಮಾರಲು  ಸಾಧ್ಯವಾದ ನೆಲವನ್ನೆಲ್ಲ ಮಾರಿ ಹೇಳ ಹೆಸರಿಲ್ಲದಂತೆ ಮಾಯವಾಯ್ತು. ಹಣವಿರುವ ಬಂಡೆಪ್ಪನವರ ಕುಟುಂಬ ಎಲ್ಲಿಯಾದರೂ ನೆಲೆಸೀತು. ಉಳಿದವರು ಮಾಡುವುದೆಂತು? ಮತೊಬ್ಬ ಪೂಜಾರಿಯನ್ನ ಬರ ಮಾಡಿ ಬಂಡೆಪ್ಪನ ಮನೆ ತೋಟದ ಸುತ್ತ ಇನ್ನೂ ಬೇಲಿ ಹಾಕಿಸಿ, ಪೂಜೆ ಮಾಡಿಸಿ , ಅಷ್ಟದಿಕ್ಕುಗಳೊಡನೆ ಇನ್ನೆರಡು ದಿಕ್ಕನ್ನ ಸಂಶೋಧಿಸಿ, ಅಲ್ಲಿಗೆಲ್ಲಾ ತಾಯತ ಕಟ್ಟಿ, ಹರಕು ಬಟ್ಟೆಯ ಮುದ್ದೆ ಮಾಡಿ ಬಿಸಾಡಿ, ಅಲ್ಲಿ ಯಾರೂ ಸುಳಿಯದಂತೆ ನಿರ್ಬಂಧಿಸಲಾಯ್ತು . ಅಘೋಷಿತವಾಗಿ ರಾತ್ರಿ ಯಾರೂ ಊರ ಹೊರ ಹೋಗುತ್ತಿರಲಿಲ್ಲ , ಕಾರಣ ಬಂಡೆಪ್ಪನ ಮನೆ ದಾಟದೆ ಬೇರೆ ದಾರಿಯಿರಲಿಲ್ಲ. 
ಕೆಲವು ದಿನಕ್ಕೆ, ಇನ್ನಷ್ಟು ಘಟನೆಗಳು ಜರುಗಿದವು. ಹಗಲು ಮೇಯ ಹೋದ , ಹಸುವೊಂದು ಕರುವಿನ ಸಮೇತ ಸಂಜೆಯಾದರೂ ಮನೆ ಬಾರದೆ ಹೋಯ್ತು. ಆಗೀಗ ಕುರ್ಕ,ಚಿರತೆಯ ಕಾಟವಿದ್ದ ಕಾರಣ ಸಂಜೆಗತ್ತಲು ಕವಿಯುವ ಮೊದಲೇ ಊರವರು 5 - 6 ಜನ ಲಾಟೀನು, ದೊಣ್ಣೆ, ನಾಯಿಗಳ ಹಿಡಿದು ಕಾಡ ಹಾದಿ ಹೊರಟರು. ಅಲ್ಪ-ಸ್ವಲ್ಪ ದೂರದಲ್ಲಿ ಕಣ್ಣಂಚಿನಿಂದ ದೂರಾಗದೆ ಎಲ್ಲರೂ ಹಸುವನ್ನ ಕೂಗಿ ಕರೆಯುತ್ತಾ , ಕಾಡಿನಾಚೆ  ಬಳಸುತ್ತಾ , ಬಂಡೆಪ್ಪನ ಮನೆ ಹಿಂದೆ ಬರತೊಡಗಿದರು. ಸುಮಾರು ದೂರಕ್ಕೆ ಆ ಸ್ಮಶಾನಸದೃಶ ಮನೆ, ತೋಟ ಕಂಡದ್ದೇ ಜನ ಅಲ್ಲಿಯೇ ನಿಂತು, ಮುಂದೆ ಹೋದರೆ ಆಗುವ ಪರಿಣಾಮಗಳ ಬಗ್ಗೆ ಚರ್ಚಿಸತೊಡಗಿದರು. ಅಷ್ಟರಲ್ಲೇ, ಬೆನ್ನು ಹುರಿ ಕೊರೆದಂತೆ ಹಸುವಿನ ಆರ್ತ ಬಂಡೆಪ್ಪನವರ ಮನೆಕಡೆಯಿಂದ ಹೊಮ್ಮಿತು. ಹಿಂದೆಯೇ, ದೂರದಲ್ಲಿ 4-5 ಕಣ್ಣುಗಳು ಫಳ-ಫಳ ಹೊಳೆದವು. ಕೊಳ್ಳಿ ದೆವ್ವ! ಕೊಳ್ಳಿ ದೆವ್ವ!! ಎಂದು ಕಿರುಚಿದನೊಬ್ಬ, ಅಯ್ಯಯ್ಯಯೋ... ದೆವ್ವ, ಕೊಳ್ಳಿ ದೆವ್ವ ಎನ್ನುತ್ತಾ, ಕೈಯಲ್ಲಿದ್ದ ದೊಣ್ಣೆ,ನಾಯಿಯನ್ನ ತೊರೆದು, ನೆಲ ಸಾರಿಸುತ್ತಿದ್ದ ಪಂಚೆ ಹಿಡಿದು ಅಲ್ಲಿಂದೆಲ್ಲರೂ ಕಾಲ್ಕಿತ್ತರು. ರಾತ್ರಿಯಿಡೀ ಊರವರಿಗೆ ನಿದ್ರೆ ಇಲ್ಲ.ನಿದ್ರೆ ಬಾರದ ಇವರ ಕಿವಿಗಳಿಗೆ ಕಾಡಿನಿಂದ ಹೊಮ್ಮುವ ಧ್ವನಿಗಳೆಲ್ಲ ತಮ್ಮ ಮನದ ಆಲೋಚನೆಗನುಸಾರ ರೂಪ ಪಡೆದು, ಮುಚ್ಚಿದ ಕಂಗಳ ಹಿಂದೆ ಆಡುತ್ತಿದ್ದವು.


ಹೇಗೋ ರಾತ್ರಿ ಕಳೆದು ಸೂರ್ಯ ರಶ್ಮಿ ನೆಲ ಸೋಂಕಲು, ಊರಿನ ಗಂಡಸರೆಲ್ಲ ಪಂಚೆ ಏರಿಸಿ, ಏರು ದನಿಯಲ್ಲಿ ಮಾತಾಡುತ್ತ, ಹಳೆಯ ರಬ್ಬರ್ ಚಪ್ಪಲಿಗಳನ್ನ ಕೈಯಲ್ಲಿ ಹಿಡಿದು ಬಂಡೆಪ್ಪನ ಮನೆಹಿಂದೆ ಹೊರಟರು. ದೆವ್ವ ಏನಾದರೂ ಕಂಡರೆ ಅದಕ್ಕೆ ಹಳೆಯ ಚಪ್ಪಲಿಯನ್ನ ತೋರಿಸಿದರೆ ಅದು ಹೆದರಿ ಓಡುತ್ತದೆಂಬ ನಂಬಿಕೆ ಇವರದ್ದು. ಕಾಲಿನ ಚಪ್ಪಲಿಯನ್ನೇ ಕಳೆದು ಹಿಂದಿನ ರಾತ್ರಿ ಓಡಿದವರು, ಕೈಯಲ್ಲಿ ಚಪ್ಪಲಿ ಹಿಡಿದು ಬರಿಗಾಲಲ್ಲಿ ನಡೆವುದು ದೆವ್ವದ ಪಾಲಿನ ಗೆಲುವಿದ್ದಂತಿತ್ತು. ಬಂಡೆಪ್ಪನ ಮನೆ ಸಮೀಪಿಸಿರೆ, ಬೇಲಿಯಾಚೆ ಕಾಣೆಯಾದ ಹಸು ಇವರಿಗೆ ಬೆನ್ನು ಮಾಡಿ ಮಲಗಿತ್ತು. ಬೇಲಿದಾಟಿ ಹೋಗುವುದು ಅಪಚಾರವೆಂದು, ಬೇಲಿಯನ್ನ ದೂರದಿಂದಲೇ ಬಳಸಿ ಹಸುವಿನ ಮುಂದೆ ಬರಲು ತೀರ್ಮಾನಿಸಿ ನಡೆದರು. ಹಸುವಿನ ಹೊಟ್ಟೆ ಬಗೆದಿತ್ತು, ಅದರ ಕರುಳು ಹೊರಬಂದು, ರಕ್ತ ಹರಿಸಿ ಅದು ಸತ್ತಿತ್ತು. ಅನತಿ ದೂರ ಬೇಲಿಗೆ ನೇತುಬಿದ್ದಂತೆ ಕರುವಿನ ದೇಹ ಬಹುಪಾಲು ಖಾಲಿಯಾಗಿ ಅಸ್ಥಿ ಮಾತ್ರ ಉಳಿದಿತ್ತು. ಈ ಭೀಭತ್ಸ ದೃಶ್ಯ ಕಂಡ ಊರವರು ಹಿಮ್ಮುಖ ಚಲಿಸುತ್ತ ,ಚಪ್ಪಲಿಯನ್ನ ಗಾಳಿಯಲ್ಲಿ ಹೊಡೆಯುತ್ತಾ ಊರು ಸೇರಿದರು. ಈ ಕೊಳ್ಳಿ ದೆವ್ವಗಳು ಪಾಲುದಾರಿಕೆಯಲ್ಲಿ, ಹಸುವನ್ನ-ಕರುವನ್ನ ಕೊಂದು ತಿಂದಿವೆ ಎಂದರು ಕೆಲವರು, ಮತ್ತೆ ಕೆಲವರು ಹಸುವೇ ಬಂಡೆಪ್ಪನ ಸೊಸೆ, ಕರುವೇ ತುಂಗಾ ಎಂದರು.ಅಂತೂ ಕೊಳ್ಳಿ ದೆವ್ವಗಳ ಇರುವಿಕೆ ಸ್ಪಷ್ಟವಾಗಿ ಊರ ಹೊರ-ಒಳ ಹೋಗುವುದೆಂತು? ಎಂದು ಚಿಂತಿಸತೊಡಗಿದರು.


ಇದೆಲ್ಲ ನಡೆದು 2 ವರ್ಷ ಕಳೆಯಲು, ಈ ಊರಿನಲ್ಲಿ ಕೆಮ್ಮು ಹತ್ತಿ ಸತ್ತವರ ಸಂಖ್ಯೆ 9 ದಾಟಿತು. ಊರವರ ಮೇಲೆ ಈ ಒಂದು ಘಟನೆ ಮಹಾಪರಿಣಾಮ ಬೀರಿತು. ಇದು ಊರಾಚೆಯ ಶನಿ ದೇವರ ಗುಡಿಯ ಅರ್ಚಕನ ಕುರಿತದ್ದು . ಈತ ಕೊಳ್ಳಿ ದೆವ್ವದ ಕಾಟ ಬಿಡಿಸಲು ಒಂದು ದಾರಿ ತೋರುವುದಾಗಿ ಊರವರ ಬಳಿ ಹೇಳಿಕೊಂಡ. ಮುಳ್ಳನ್ನ ಮುಳ್ಳಿನಿಂದಲೇ ತೆಗೆಯಬೇಕು. ಅಂತಲೇ, ಕೊಳ್ಳಿ ದೆವ್ವಕ್ಕೆ ಕೊಳ್ಳಿಯೇ ಮದ್ದು ಎಂದ. ಊರವರ ಬಳಿಯಿದ್ದ ಸಬ್ಸಿಡಿ ಸೀಮೆಎಣ್ಣೆಯನ್ನ ಪಡೆದು, ಅದನ್ನ ಬೇಲಿಯ ಸುತ್ತಲೂ ಹಾಕಿ ಸುಡುವುದೆಂದೂ, ತಾನು ಬೇಲಿಯಾಚೆ ಪೂಜೆ ನೆರವೇರಿಸುವುದೆಂದೂ ಹೇಳಿದ. ಜನ ಒಪ್ಪಿದರು. ಈ ಪೂಜೆ ಮಹಾ ಅಪಾಯದ್ದೆಂದು ಇದನ್ನ ತಾನು ರಾತ್ರಿ ನೆರವೇರಿಸಿ, ಬೆಳಗ್ಗೆ ಆ ಬೇಲಿಯ ಭಸ್ಮವನ್ನ ತುಂಗೆಗೆ ಸುರಿವುದಾಗಿ ಹೇಳಿ ಹೊರಟ. ಊರ ಜನ ಆ ರಾತ್ರಿ ದೂರದಿಂದ ಚೌಕಾಕಾರವಾಗಿ ಬಂಡೆಪ್ಪನ ತೋಟದ ಬೇಲಿ ಸುಡುವುದ ಕಂಡರು, ಬೆಂಕಿಯ ಜ್ವಾಲೆ ಅಡಕೆ ಮರದೆತ್ತರಕ್ಕೆ ಜ್ವಲಿಸುತಿತ್ತು. ಭಯ,ಭಕ್ತಿ,ನಡುಕದಿಂದ ನೋಡುತಿದ್ದ ಜನಕ್ಕೆ ಅರೆಕ್ಷಣ ಬೆಂಕಿ ಚಲಿಸಿದಂತಾಯ್ತು. ಹೌದಾದು ಬೆಂಕಿ ಚಲಿಸುತ್ತಿತ್ತು!! ಆ ಮಹಾ ಬೆಂಕಿಯಿಂದ ಮನುಷ್ಯಾಕೃತಿಯೊಂದು, ಊರ ಕಡೆಗೆ ಓಡೋಡಿ ಬರಹತ್ತಿತು. ಕೊಳ್ಳಿ ದೆವ್ವದ ಈ ಸಾದೃಶ ರೂಪಕ್ಕೆ ದಿಕ್ಕು ತೋಚದ ಜನ ಊರಿಗೆ ಬೆನ್ನು ಹಾಕಿ ಮಕ್ಕಳಾದಿಯಾಗಿ ಕಾಡು ಸೇರಿಕೊಂಡರು. ಕಾಡಿನಲ್ಲೇ ಚಳಿಗೆ ಮೈ ಒಡ್ಡಿ, ನಡುಗುತ್ತಾ , ನೆನಪಾದ ದೇವರನ್ನೆಲ್ಲ ಕೂಗಿ-ಕೂಗಿ ಕರೆಯುತ್ತಾ , ಸೂರ್ಯ ದೇವನ ದರ್ಶನವಾಗುವ ಯಾವ ನಿರೀಕ್ಷೆಯೂ ಇಲ್ಲದಂತೆ ರಾತ್ರಿ ಕಳೆದರು. ಆಕಾಶಕ್ಕೆ ಕೊಳ್ಳಿಯ ಕಿಚ್ಚು ಹಚ್ಚಿದಂತೆ ಸೂರ್ಯೋದಯವಾಯ್ತು. ಜನವೆಲ್ಲ ಜಾತಿ, ಲಿಂಗ ಬೇಧ ಮರೆತು ಕೈ-ಕೈ ಹಿಡಿದು ಊರಿನೊಳಕ್ಕೆ ಬಂದರು. ರಾತ್ರಿ ಕಂಡ ಆ ಕಿಚ್ಚಿನಾಕೃತಿ ಈಗ ಕರಕಲಾಗಿ, ಯಾರದೋ ಬಾವಿಕಟ್ಟೆಯ ಬಳಿ ಬಿದ್ದಿತ್ತು. ಕೊಳ್ಳಿ ಇಟ್ಟು ದೆವ್ವ ಓಡಿಸ ಬಂದವನನ್ನೇ ಸ್ವಾಹಾ ಮಾಡಿದ ದೆವ್ವದ ಶಕ್ತಿಗೆ ಸೋತ ಜನವೆಲ್ಲ, ಸಂಜೆಯಾಗುವುದರ ಒಳಗಾಗಿ ಊರು ಖಾಲಿ ಮಾಡುವ ನಿರ್ಧಾರಕ್ಕೆ ಬಂದರು.


ಇಸವಿ 1989 , ವಿಶ್ವ ಆರೋಗ್ಯ ಸಂಸ್ಥೆ ಕ್ಯಾತನೂರಿಗೆ ಬಂದಿತು. ತಮ್ಮ ಕೈಯಲ್ಲಿ ತುಂಗಾಳ ರಕ್ತದ ಮಾದರಿ ಹಿಡಿದು ಬಂದಿದ್ದ ಆ ತಂಡ, ಹೊಸ ಮಾದರಿಯ ಬ್ಯಾಕ್ಟೀರಿಯಾವನ್ನ ಕಂಡುಹಿಡಿದಿತ್ತು. ಕ್ಷಯರೋಗದ ಸಂಬಂದಿಯಾಗಿದ್ದ  ಈ ಬ್ಯಾಕ್ಟೀರಿಯಾ ಗೆ K .Coli ಎಂದರೆ Kyatanuru Coli ಎಂದು ನಾಮಕರಣ ಮಾಡಿದ್ದರು. ಜನವಿಲ್ಲದೆ ನಾಮಾವಶೇಷವಾಗಿದ್ದ ಆ ಊರಿನ ಒಳಹೊಕ್ಕು ಮೇಲೆ ತಿಳಿಸಿದ ಘಟನೆಯ ಕುರಿತಾಗಿ ವರದಿ ಒಪ್ಪಿಸಿದರು. 
"K .Coli ರೋಗ ನಿರೋಧಕ ಶಕ್ತಿ ಕಡಿಮೆಯಾದವರ ಕರುಳು ಹೊಕ್ಕು, ಅನ್ನ ನಾಳದಿಂದ ಹೊಟ್ಟೆಯವರೆಗೂ ಬೊಬ್ಬೆಗಳಾಗಿ ಪ್ರತಿ ಬಾರಿ ಕೆಮ್ಮಿದಾಗಲೂ ರಕ್ತ ಕಕ್ಕುವಂತೆ ಮಾಡುತಿತ್ತು. ಬಿರು ಬಿಸಿಲಿಗೆ ರೋಗ ಉಲ್ಭಣವಾಗಿ ಉಸಿರಿನಿಂದ ಹರಡುತ್ತಿತ್ತು. ಹೀಗೆ ಬಂಡೆಪ್ಪನ ಸೊಸೆ ಸೋಂಕು ತಗುಲಿ ಸತ್ತಳು , ತನ್ನ ಮನೆಯಲ್ಲೆಲ್ಲ ಬ್ಯಾಕ್ಟೀರಿಯಾವನ್ನು ಸ್ಪುರಿಸಿಯೇ ಸತ್ತಿದ್ದಳು. ತುಂಗಾಗೆ ಅಮ್ಮ ಆದಾಗ ರೋಗ ನಿರೋಧಕ ಶಕ್ತಿ ಕುಂದಿ, K . Coli ಗೆ ಹೊಸ ದೇಹ ಸಿಕ್ಕು ಇವಳ ಬಲಿಪಡೆದಿತ್ತು. ಇನ್ನು ಕಣ್ಣು ಕಳೆದುಕೊಂಡ ಆಳು ಸೋಂಕಿನಿಂದ ನಲುಗಿ, ಇದೇ ಬ್ಯಾಕ್ಟೀರಿಯಾ ಪ್ರಭಾವದಿಂದ ಸತ್ತಿದ್ದು. ಇನ್ನು ಆ ಕರು ಬೇಲಿಗೆ ಸಿಕ್ಕಿಹಾಕಿಕೊಂಡಿರಬೇಕು, ಬೇರೆ ಹಸುಗಳು ಮನೆಕಡೆ ಹೊರಟರೂ ಅದರ ತಾಯಿ ಹಿಂದೆ ಉಳಿದಿತ್ತು, ಕುರ್ಕವೋ- ಚಿರತೆಯೋ ಸುಲಭಕ್ಕೆ ಸಿಕ್ಕ ಇವುಗಳನ್ನ ಹಿಡಿದು ತಿನ್ನ ಬಂದಿದೆ, ಅದೇ ಕಾಲಕ್ಕೆ ಬೇಲಿ ಸಮೀಪಿಸಿದ ಊರ ಜನಕೆ ಈ ಪ್ರಾಣಿಗಳ ಕಣ್ಣುಗಳು ಕತ್ತಲೆಯಲ್ಲಿ ಮಿನುಗಿ ಭಯ ಹುಟ್ಟಿಸಿವೆ.ಇನ್ನು ಆ ಅರ್ಚಕ ಅಚಾತುರ್ಯದಿಂದ ಬೆಂಕಿಯಲ್ಲಿ ಬೆಂದು ಹೋಗಿದ್ದಾನೆ"


ಹೀಗೆ ತನ್ನೂರು ವಿಶ್ವಕ್ಕೇ ತಿಳಿವ ಕಾಲಕ್ಕೆ ಊರ ಜನವೆಲ್ಲ ಮರೆಯಾಗಿ ಊರನ್ನ ಕಾಡು ನುಂಗಿ, K .Coli ಪಠ್ಯ ಪುಸ್ತಕದ ದಂಥ ಕಥೆಯಾಯ್ತು. ಎಂದಾದರೂ ಆ ದಾರಿಗುಂಟ ಹೊರಟರೆ , ಎಡಕ್ಕೆ ಹೊರಳಿ ಬನ್ನಿ, ಕೊಳ್ಳಿ ಕ್ಯಾತನೂರಿನೆಡೆ! 


0
Reading under T&C