Kannada ·
Fiction
ಕಾವೇರಿ ನಮ್ಮದು
'ಸೂರಿ ನನ್ನ ಫ್ರೆಂಡ್ ಇದಾನೆ ಅಂದಿದ್ನಲ್ಲೋ'
'ಯಾರ್ ಹೇಳು?'
'ಮಂಕೆ, ಬೆಂಗಳೂರು ಹುಡುಗ, ಕಾಮಾಕ್ಷಿಪಾಳ್ಯದವನು. ಒಂದು ಇಂಡಿಕಾ ಇದೆ ಅಂತೇ, ಕೊಯಂಬತ್ತೂರ್ ದು'
'ಹೋ, ಕಾರ್ತಿಕೇಯ್ಯನ್ ತಾನೇ? ಆ ನನ್ ಮಗಂಗೆ ಬೈಯ್ಯೋಕು ಆಗಲ್ವಲ್ಲೋ, ಹೆಸ್ರಲ್ಲೇ ಬೈಗುಳ ಇದೆ'
'ದೇವ್ರು ಹೆಸರು ಕಣೋ ಸೂರಿ, ನಿಂದೊಳ್ಳೆ, ವಿಷಯ ಕೇಳು, 60 ,000 ಕ್ಕೆ ಕೊಡಿಸ್ತಾನೆ ಅಂತೆ, 3 ದಿನ ಟೈಮ್ ಕೇಳಿದೀನಿ, ಹೋಗಿ ನೋಡ್ಕೊಂಡು, ಗಾಡಿ ತಂದು ಬಿಡೋಣ'
'ಆಯಿತು ರಾತ್ರಿ ಬಸ್ ಗೆ ಹೋಗೋಣ'
ಸುರೇಶ್ ಹೆಸರಿರುವ ಸರ್ವರಿಗೂ 'ಸೂರಿ' ಅಡ್ಡನಾಮ.ಬಾಡಿಗೆ ಆಟೋ ಇಂದ ಸ್ವಂತ ಟ್ಯಾಕ್ಸಿ ಇಡುವ ಆಸೆ ಇವನದ್ದು. ಹೊಸ ಕಾರ್ ನ ಬೆಲೆ ಹೆಚ್ಚು, ಎಂತಲೇ ಕನಿಷ್ಠತಮ ಸೆಕೆಂಡ್/ಥರ್ಡ್ ಹ್ಯಾಂಡ್ಲ್ಡ್ ಕಾರ್ ಆದರೂ ಕೊಂಡುಕೊಳ್ಳೋಣವೆಂದು ಇಚ್ಛೆ .
ಒಮ್ಮೆ ನಮ್ಮ ಹೊಳಲ್ಕೆರೆ ಗೆ ಬಂದು ನೋಡಿ , ಯುವಕರದೊಂದು ಧಾಟಿ ಇಲ್ಲಿ.ಸ್ಕೂಲ್ ಅಥವಾ ಕಾಲೇಜು ಫೇಲ್ ಆದ ಹಲವರ ಸಣ್ಣ ಆಸೆಗಳಿವೆ. ನಮ್ಮೂರಿನ ಬಸ್ ಹತ್ತುವ ಇವರು, ಸ್ವಯಂಸೇವಕರಂತೆ ಬಸ್ ನ ಕಂಡಕ್ಟರ್ ಕೆಲಸ ಮಾಡುತ್ತಾರೆ. ಸುಮ್ಮನೆ ಬಸ್ ನ ಬಾಗಿಲ ಬಳಿ ನಿಂತು, ಪ್ರತಿ ಸ್ಟಾಪ್ ನಲ್ಲೂ ಇಳಿದು ಜನ ಹತ್ತಿದ ಮೇಲೆ ಇವರೂ ಪುನಃ ಹತ್ತಿ, ಹೊಯ್ಯ್.... ಎಂದರೇನೇ ಇವರ ಪ್ರಯಾಣಕ್ಕೆ ತೃಪ್ತಿ. ಮತ್ತೆ ಕೆಲವರದ್ದು, ಆಟೋ ಡ್ರೈವರ್ ಗಳ ಸ್ನೇಹ ಬೆಳೆಸಿ, ಅವರ ಪಕ್ಕದ ಸೀಟ್ನಲ್ಲಿ ಡ್ರೈವರ್ ಒಟ್ಟಿಗೆ ಕುಂಡೆಯಾನಿಸಿ ಕೂರುವ ಖಯಾಲಿ. ಇನ್ನುಳಿದವರು ಟ್ರ್ಯಾಕ್ಟರ್ ಹಿಂದೆ, ಇನ್ನು ಸ್ವಲ್ಪ ಜನ ಬೀಡಾ ಅಂಗಡಿ ಮುಂದೆ.
ಸ್ವಲ್ಪ ಕಾಲ ಸರಿದು ತಮ್ಮ ಈ ಜಾಗಕ್ಕೆ ಕಿರಿಯ ಹುಡುಗರು ಬಂದು ಸೇರಿದ್ದೇ, ಇವರಿಗೆ ತಮ್ಮ ವಯಸ್ಸಿನ ಅರಿವಾಗಿ, ಆಟೋ ಇಡುವುದೋ,ಟ್ಯಾಕ್ಸಿ, ಟ್ಯಾಂಕರ್,ಟ್ರಿಪ್ಪರ್,ಟ್ರ್ಯಾಕ್ಟರ್ ಓಡಿಸೋ ಕೆಲಸಕ್ಕೆ ಸೇರುವುದು ವಾಡಿಕೆ. ಇದೆ ಸೂತ್ರದಿಂದ ಹೊರಬಂದ ಮತ್ತೊಂದು ಫಲಿತಾಂಶವೇ ಸೂರಿ!
'ಏನೇ ಹೇಳು, ಗಾಡಿ ಮಾತ್ರ ಬೆಣ್ಣೆ - ಬೆಣ್ಣೆ ತರಹ ಇದೆ'... ಒಮ್ಮೆ ಬೆಣ್ಣೆ ಎಂದರೆ ವಾಕ್ಯಕ್ಕೆ ತೂಕವಿರದು, ಎಂತಲೇ ಬೆಣ್ಣೆ-ಬೆಣ್ಣೆ ಎಂಬುದು!
'ನಿಜ ಕಣೋ ಗೋಪಿ, ದುರ್ಗಾ, ದಾವಣಗೆರೆ ಎಲ್ಲಿನೂ ಇಷ್ಟೊಳ್ಳೆ ಗಾಡಿ ಸಿಕ್ತ ಇರ್ಲಿಲ್ಲ ಬಿಡು'
'ನಂಬರ್ ಒಳ್ಳೆಯದ್ದೇ ಸಿಕ್ಕಿದೆ ಅಲ್ವ TN-38 NW -3838 '
'ಒಂದ್ ಸಲ ದುರ್ಗದಲ್ಲಿ ಸರ್ವಿಸ್ ಮಾಡಿಸಿ ಆಮೇಲೆ ಓಡಿಸ್ತಿನಿ'
'ಹಾಗೆ, ಬೇರೆ ಕೆಲಸಾನು ಮಾಡಿಸು 10 ,000 ಖರ್ಚಾಗಲಿ ಏನಂತೆ'.
ಒಂದು ಕನಸಿದ್ದು ಅದು ನೆರವೇರುವ ತನಕ ಇರುವ ಬೇಗುದಿ , ಕನಸು ತೀರಿದಾಗ ಇರುವುದಿಲ್ಲ. ಕನಸು ನೆರವೇರಿದ ಕ್ಷಣ ಅಂತರಾತ್ಮಕ್ಕೆ ತೃಪ್ತಿ , ಮತಿಗೆ ಪ್ರೌಢಿಮೆ ಪ್ರಾಪ್ತಿಯಾದಂತೆ!
'3 ದಿನ ಮೈಸೂರ್ ಗೆ ಹೋಗಬೇಕಪ್ಪ, ಬಾಡಿಗೆ ಎಷ್ಟು ಏನಂತ ಮನೆ ಹತ್ತಿರ ಬಂದು ಮಾತಾಡಿ ಹೋಗು' ರುದ್ರಪ್ಪ ಪ್ರಶಾಂತವಾಗಿ ಕರೆದರು
'ಆಯ್ತು ಯಜಮಾನರೇ, ಒಂದರ್ಧ ಘಂಟೆ ಬಂದುಬಿಡ್ತೇನೆ'
ಸೂರಿ, ಮುಂತಿಳಿಸಿದಂತೆ ಸಮಯಕ್ಕೆ ಸರಿಯಾಗಿ ಹೋಗಿ ಬಾಡಿಗೆ ಮಾತಾಡಿ ಬಂದ. ಜನ ಒಳ್ಳೆಯವರು, ಬಾಡಿಗೆ ಮಾತಾಡ ಬಂದ ಹುಡುಗನಿಗೆ ತಿಂಡಿ ಕಾಫಿ ಕೊಟ್ಟು ಕಳಿಸಿದರು. ಸತ್ಕಾರಕ್ಕೆ ಅಂತಸ್ತಿನ ನಿರ್ಬಂಧವೆಲ್ಲಿ? ಸತ್ಕಾರ ಯೋಗ್ಯ ವಿನಮ್ರತೆ ಇದ್ದರಾಯ್ತು!
ಮೈಸೂರು ಪ್ರವಾಸದ ಎರಡನೇ ದಿನ ಕಳೆದಿತ್ತು.
'ಹೊರಗೆ ಬಹಳ ಚಳಿ ಇದೆ ಸೂರಿ, ಗೆಸ್ಟ್ ಹೌಸ್ ನಲ್ಲಿ ಒಂದು ರೂಮ್ ಮಾಡಿ ಕೊಡ್ತೇನೆ ಮಲಗು ಇಲ್ಲಿ' ರುದ್ರಪ್ಪ ಕಳಕಳಿ ಇಂದ ಹೇಳಿದ.
'ನಂಗೆ ಕಾರ್ ಅಲ್ಲಿ ಮಲಗಿ ಅಭ್ಯಾಸ ಇದೆ ಯಜಮಾನರೇ, ಸುಮ್ನೆ ಯಾಕೆ ರೂಮ್ ಎಲ್ಲಾ' ಸೂರಿಗೆ ನೆನ್ನೆ ರಾತ್ರಿಯ ಚಳಿ ಇಂದ ಮೂಗು ಸೋರುತ್ತಿದರೂ ಸೌಜನ್ಯದಿಂದ ನುಡಿದ.
'ನಾ ಹೇಳಿದಷ್ಟು ಮಾಡು ಇವಾಗ, ಇಲ್ಲಿ ಒಂದು ರೂಮ್ ಮಾಡ್ತೇನೆ, ನಾಳೆ ರಾತ್ರಿ ಬೇರೆ ಡ್ರೈವ್ ಮಾಡಬೇಕು ನೀನು'
'ಆಯ್ತು' ಎಂದವನೇ ಸಂತೋಷದಿಂದ ಗೆಸ್ಟ್ ಹೌಸ್ ಹೊಕ್ಕು ಮಲಗಿದ.
ಮಾರನೆಯ ದಿನದ ವೇಳಾಪಟ್ಟಿ 8 ಕ್ಕೆಂದು ಆರಂಭವೆಂದು ತೀರ್ಮಾನವಾಗಿದ್ದರಿಂದ , ಆರಾಮ ಮಲಗಿದ್ದ ಸೂರಿ ಗೆ, ಇಂದ್ರಿಯಾತೀತ ಶಕ್ತಿ ಬಡಿದೆಬ್ಬಿಸಿದಂತಾಯ್ತು. ಎಂತಲೇ ಸಮಯವನ್ನೊಮ್ಮೆ ನೋಡಿದ. ಬೆಳಗಿನ 6 ಘಂಟೆ ದಾಟಿತ್ತು. ಗೆಸ್ಟ್ ಹೌಸ್ ನ ಹೊರ ಬಾಗಿಲಿಗೆ ಬರುತ್ತಿದಂತೆ, ಅದರ ಮಾಲೀಕ, ಕೆಲಸದವರು, ತ್ವರಿತವಾಗಿ ಬಾಗಿಲಿಳೆಯುತ್ತಿದ್ದರು. ಧಾವಂತ ಎಲ್ಲರ ಮುಖ ಪ್ರವೇಶಿಸಿತ್ತು.
'ಏನು ಸಮಾಚಾರ? ಏನಾಯಿತು' ಎಂದ ಸೂರಿ.
'ಅದೇ ಕಾವೇರಿ ಗಲಾಟೆ, ನೆನ್ನೆ ಸಂಜೆ ಇಂದ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟಿದೆ ಅಂತೆ, ಅದಕ್ಕೆ ಇವತ್ತು ಬಂದ್ ಮಾಡ್ತಾ ಇದ್ದಾರೆ' ಒಬ್ಬ ವಿವರಿಸಿದ.
ಸಹನೆ ಕಳೆದು ಕೊಂಡ ಗೂಳಿಯಂತೆ ಬೊಬ್ಬಿಡುತ್ತಾ ಜನರ ಹಿಂಡು ಗೆಸ್ಟ್ ಹೌಸ್ ನ ಹಾದು ಹೋಯ್ತು. ಕೈ ಗೆ ಸಿಕ್ಕದನ್ನಾ ತೂರುತ್ತ , ಘೋಷಣೆ ಕೂಗುತ್ತ, ಮನುಷ್ಯ ಸಹಜವಲ್ಲದಂತೆ ವರ್ತಿಸುತ್ತಿತ್ತು.
ಇದರ ಮಧ್ಯೆ ನುಸುಳಿ ಹೊರಬಂದ ಸೂರಿ, ತನ್ನ ಕಾರು ಅಂಧಶ್ರದ್ಧರ ಅಧ್ವರದಲ್ಲಿ ಜ್ವಲಿಸುತ್ತಿರುವನ್ನ ಕಂಡು, ಗೋಳಾಡಲು ಸ್ವರವಿಲ್ಲದೆ ನೆಲಕುಸಿದ.
'ಕಾವೇರಿ ನಮ್ಮದು' ಎಂಭ ಘೋಷಣೆಯೊಂದಿಗೆ ಮುಂದೆ ಹೊರಟ ಜನಸ್ತೋಮ, ತಮ್ಮ ರೇಜಿಗೆಯನ್ನ ಹೊರಹಾಕಲು ಮತ್ತೊಂದು ಮಿಕ ಹುಡುಕುತ್ತ ಮುಂಚಲಿಸಿತು!