Kannada · Fiction

ತಾರ್ಕಿಕವಲ್ಲದ ಅಂತ್ಯ

Writer DP! Preetham Pais 09 Sep 19 20 Views

"ಮತ್ತೆ... ಪದ್ಮ.. ಹೇಗಿದ್ದೀಯ? ಜ್ವರ ಕಡಿಮೆ ಆದಂತಿದೆ ಅಲ್ವ?" ಹೆಚ್ಚು ಕಡಿಮೆ ತನ್ನದೇ ಪ್ರಾಯದವಳಾದ ಪದ್ಮಳನ್ನ ಏಕವಚನದಲ್ಲಿ ಕರೆವುದು Dr ನವ್ಯ ಳಿಗೆ ಸುಲಭದ್ದಾಗಿತ್ತು. 
"ಹೂ.. ಮೇಡಂ. ಜ್ವರ ಕಡಿಮೆ ಆಗಿದೆ. ಆದರೆ ಮೊನ್ನೆ ಇಂದ ಸ್ವಲ್ಪ ಕೆಮ್ಮು..... ಹೊಟ್ಟೆ ಎಲ್ಲಾ ಉರಿ-ಉರಿ" ಎನ್ನುತ್ತಾ, ಬರಿಯ 'ಕೆಮ್ಮು' ಎಂದರೆ ಸಾಲದೆಂದು ಎರಡು ಸಾರಿ ಕೆಮ್ಮಿಯೂ ತೋರಿಸಿದಳು ಪದ್ಮ.
"ಮೊನ್ನೆ ಇಂದ ಅಲ್ವಾ... ಔಷಧ ಕೊಡ್ತೇನೆ, ಕಡಿಮೆ ಆಗದಿದ್ದರೆ ವಾರ ಕಳೆದು ಬರುವಿಯಂತೆ. ಮತ್ತೇನಾದರೂ ತೊಂದರೆ ಇದೆಯಾ? ಊಟ ಸೇರ್ತದೆ ತಾನೇ?"
"ಊಟ ಸೇರ್ತದೆ ಮೇಡಂ, ಹಸಿವು ಹೆಚ್ಚೇ ಇದೆ. ಅವರ ಹಾಗೆ ನನಗೂ ಕೆಮ್ಮು ಬಂದು...."
"ಛೆ.. ಛೆ ಹಾಗೆ ಆಗಲ್ಲ. ಇದನ್ನೆಲ್ಲಾ ಯೋಚಿಸ್ತಿರ್ಬೇಡ. ಅವರಿಗೆ ಆಗಿದ್ದು ನಿನಗೂ ಆಗಬೇಕೆಂದಿಲ್ಲ. ಕೊಟ್ಟ ಮಾತ್ರೆಗಳನ್ನ ಸರಿಯಾಗಿ ತೆಗೆದುಕೋ. 3 ಬೇರೆ ಬೇರೆ dose ನ ಡಬ್ಬಿಗಳಿವಲ್ಲ, ಬರೆದಿಟ್ಟು, chart ನೋಡಿ ತೆಗೆದುಕೋ"
"ಆಗಲಿ ಮೇಡಂ, ಕೆಮ್ಮು ಹೆಚ್ಚಿದ್ರೆ ಪುನಃ ಬರ್ತೇನೆ"
"ಯಾವಾಗಲಾದರೂ ಬಾ, ಏನೇ ಸಂಶಯ ಇದ್ದರೂ ಕೇಳು, ಸಂಕೋಚಪಡಬೇಕಿಲ್ಲ"
ಚನ್ನಗಿರಿ ಸರ್ಕಾರಿ ಆಸ್ಪತ್ರೆಯ ART ಸೆಂಟರ್ನಲ್ಲಿ ಕುಳಿತು ನವ್ಯ ಯೋಚಿಸಿದಳು. ಕೆಲವು ಪೇಶಂಟ್ಸ್ ಹಾಗೆ ಅಲ್ಲವೇ, ಮನದಿಂದ ಸರಿಯುವುದೇ ಇಲ್ಲ.ಕೆಲವೇ ತಿಂಗಳ ಅಂತರ ನಮ್ಮಿಬ್ಬರಿಗೂ. ಆದರೆ ಎಂತಹ extreme ends of life ನಲ್ಲಿದ್ದೇವೆ. ನಾನೋ ಮನೆಯಲ್ಲಿ ಮದುವೆಯಾಗು ಎಂದರೆ Orthopedic ಆಗಬೇಕು ಅಂದು ಅಪ್ಪನ ಬೇಸರಕ್ಕೆ ಕಾರಣಳಾಗಿದ್ದೇನೆ. ಪದ್ಮಳೋ ಮದುವೆಯಾಗಿ, ಸಂಸಾರ ಸಾಗಿಸಿ, ಕಷ್ಟ-ಕಾರ್ಪಣ್ಯಗಳನ್ನೆಲ್ಲ ಕಂಡು ತನ್ನ ವಯಸ್ಸಿಗಿಂತ ಹೆಚ್ಚಿನ ಪ್ರೌಢಿಮೆ ಪಡೆದಂತೆ ಕಾಣುತ್ತಾಳೆ. ಆದರೂ... ಈ ತೆರನಾದ ಮದುವೆಯಾಗುವುದಾದರೆ ಅದರ ಸಹವಾಸವೇ ಬೇಡಪ್ಪ! ಈ ಮದುವೆಯೋ... ಅದೆಂತಹ gamble , ಸರ್ವೋತ್ತಮ ಸಿಕ್ಕಿದರೆ ಸೀರುಂಡೆ, ಹಾದಿತಪ್ಪಿ ಉಂಡಾಡಿ-ಗುಂಡ ಸಿಕ್ಕರೆ ಅಧೋಗತಿ. 
ಇಷ್ಟೆಲ್ಲಾ ಯೋಚಿಸಿರೆ ನರ್ಸ್ ಒಳಗೆ ಬಂದ ಸದ್ದಾಯಿತು, "ನೆಕ್ಸ್ಟ್ ಪೇಶೆಂಟ್ ಕಳಿಸಲಾ ಮೇಡಂ?"
ಗೋಣನ್ನಷ್ಟೇ ಆಡಿಸಿದಳು ನವ್ಯ.

ಪದ್ಮ ಮದುವೆಯಾಗುವುದಕ್ಕೂ ಕಾರಣವಿಲ್ಲದಿಲ್ಲ. ಈಕೆಗೆ ತನ್ನ ತಂದೆಯ ಮೊಗ ಕಂಡ ನೆನಪಿಲ್ಲ. ಈಕೆ ಎರ್ಡುಮೂರು ವರ್ಷದವಳಿದ್ದಾಗ ತೀರಿಹೋದರಂತೆ. ತಾಯಿಯ ಮಾಮ ಚೆನ್ನನೇ ಮನೆಗೆ ಗಂಡು ದಿಕ್ಕು. ಊರಿಂದ ಬರುವ ಮಾಮ ಕಾಲಕ್ಕೆ ತಕ್ಕಂತೆ ಮಾವೋ, ಹಲಸೋ, ಕಬ್ಬೊ, ಚಟ್ನಿಗೆ ಬೇಕಾದ ತೆಂಗನ್ನೊ ಹೊತ್ತು ತರುವ. ಹಣ್ಣಾದ ಮಾವನ್ನ ಸೀಕರಣೆಗೆ ಹಿಂಡುವಂತೆ ತನ್ನ ಬಿಗಿದಪ್ಪಿಕೊಳ್ಳುವ. ತಾಯಿ ಇಲ್ಲದಿರೆ ಈ ಹಿಡಿತ ಮತ್ತಷ್ಟೂ ಬಿಗಿಯಾಗಿ ಉಸಿರುಗಟ್ಟುತ್ತಿತ್ತು. 'ನಮ್ಮ ಪದ್ಮನ ಕಂಡರೆ ಜೀವ ಚೆನ್ನಂಗೆ' ಎಂದು ತಾಯಿ ಊರ ತುಂಬಾ ಹೇಳುವಳು. ಆದರೀ ಪ್ರೀತಿಯ ತೋರ್ಪಡಿಕೆ ಅನುಚಿತದೆಡೆಗೆ ಹೊರಳುತಲಿತ್ತು. ವ್ಯಕ್ತಪಡಿಸಲಾಗದೆ ಪದ್ಮ ಹಲುಬಿದ್ದೆಷ್ಟು, ನರಳಿದ್ದೆಷ್ಟು. 
ಹೀಗಿರೆ ಪದ್ಮಳಿಗೆ ಆಗಿನ್ನೂ 16 ಕಳೆದಿರಬೇಕು. ತನ್ನ ಸಂಬಂಧಿಕರೊಬ್ಬರಿಂದ ನೆಂಟಸ್ತಿಕೆ ಮನೆಬಾಗಿಲಿಗೆ ಬಂದಿತ್ತು.ರೂಢಿಗತದಂತೆ ತಾಯಿ ತನ್ನ ತಮ್ಮನ ಅಭಿಪ್ರಾಯ ಕೇಳಿದಳು.
"ಸಣ್ಣ ಹುಡುಗಿ ಅಕ್ಕ..... ಏನು ತಿಳೀತದೆ ಹೇಳು? ಮಾಡಿದರಾಯ್ತು ಬಿಡು" 
"ನಿನಗೂ ನನಗೂ ಅವಳು ಸಣ್ಣವಳೇ. ಹಾಗಂತ ಎಂದಾದರೂ ಮಾಡುವೆ ಮಾಡಬೇಡವಾ?"
"18 ಆದರೂ ತುಂಬಲಿ"
"ತುಂಬಿದ ಮೇಲೆ ಕಣೋ ಮಾಡೋದು, ಇವಾಗ್ಲೆ ಮಾಡ್ತೇನೆ ಅಂದ್ನ? ತುಂಬಲಿ ಬಿಡು"
"ಪದ್ಮ ಏನಂತಾಳೆ?"
"ಇಲ್ಲೇ ಇದ್ದಾಳಲ್ಲ, ಕೇಳು ನೀನು ಒಂದು ಮಾತು"
"ಏನೆ ಪದ್ಮ ಮದ್ವೆ ಆಗ್ತೀಯಾ?" ಅದ್ಹೇಗೋ ಕಣ್ಣಂಚಿನಿಂದೆಂಬಂತೆ ಸವಾಲೆಸೆದ ಚೆನ್ನ.
ಚೆನ್ನನ ಮುಖ ನೋಡ ಮನಸ್ಸಿಲ್ಲದ ಪದ್ಮ ಅರೆಕ್ಷಣ ಯೋಚಿಸಿದಳು. ಗಂಡನೆಂಬವ ಜೊತೆ ಇದ್ದರೆ ವರ್ಷಕ್ಕೆರಡು ಕಾಲ ಅನುಭವಿಸುವ ಈ ಹಿಂಸೆಯಿಂದ ಮುಕ್ತಿಯಾದರೂ ದೊರಕೀತು.
"ಹೂ" ಎಂದು ತಾಯಿಯೆಡೆ ನೋಡಿದಳು ಪದ್ಮ.

ವರ್ಷಕ್ಕೇನು? ಬಿಸಿಲು ಸುಟ್ಟು, ಮಳೆ ತೋಯ್ದು, ಚಳಿ ಅವುಡುಗಚ್ಚಿಸಿ ಕಳೆದೇ ಹೋಯ್ತು. ಅಷ್ಟರಲ್ಲಿ ಪದ್ಮಳಿಗೂ , ಗಂಡನಾಗುವ ಲೊಕೇಶನಿಗೂ ಸಲುಗೆ ಬೆಳೆದಿತ್ತು. ಲೋಕೇಶ ಶಿವಮೊಗ್ಗದಲ್ಲಿ ಕಾರ್ ಓಡಿಸುತ್ತಿದ್ದ, ಆಗಾಗ್ಗೆ ಚನ್ನಗಿರಿಗೆ ಬಂದು ಪದ್ಮಳನ್ನ ಸಂತೇಬೆನ್ನೂರಿನ ಪುಷ್ಕರಣಿಗೊ, ಸೂಳೆಕೆರೆಯ ದಂಡೆಗೋ ಕರೆದೊಯ್ಯುವ. ನವಿರಾದ ಈತನ ಸ್ಪರ್ಶ ತನ್ನ ಹಿಂದಿನ ಅನುಭವಕ್ಕಿಂತ ಅದೆಷ್ಟು ವಿಭಿನ್ನವೆಂಬ ಅರಿವು ಮೂಡಿತು. 
"ನಾನಿರುವವರೆಗೂ ನಿನ್ನ ಚನ್ನಾಗಿ ನೋಡಿಕೊಳ್ತೇನೆ ಪದ್ಮ" ಲೋಕೇಶ ಕಾರಿನ ಗೇರಿನಾಚೆ ಇದ್ದ ಈಕೆಯ ಬಲಗೈ ಹಿಡಿದು ಹೇಳಿದ.
"ನಾನೂ" ಎಂದಳು ಪದ್ಮ.
"ಜೀವನದಲ್ಲಿ ಬಹಳ ಕಷ್ಟ ಪಟ್ಟಿದ್ದೇನೆ, ತಪ್ಪು ಮಾಡಿದ್ದೇನೆ, ಕುಡೀತಾ ಇದ್ದೆ..... ಬಿಟ್ಟಿದ್ದೇನೆ... ಇನ್ಮೇಲೆ ಯಾವುದನ್ನೂ ಮಾಡೋಲ್ಲ"
"ನಾನೂ" ಕಾರಿನ ಮುಂಬಾಗ ರಸ್ತೆಯ ಬಿಳಿಪಟ್ಟಿಗಳನ್ನ ನೋಡುತ್ತಾ ಹೇಳಿದಳು ಪದ್ಮ.
" ಎಲ್ಲದಕ್ಕೂ , ನಾನೂ -ನಾನೂ ಅಂತೀಯಾ" ಎಂದವನೇ ಪದ್ಮಳ ಕರ ಹಿಡಿದು ತನ್ನೆಡೆ ಸೆಳೆದ.
ಮದುವೆಯ ಕಾರ್ಯವೆಲ್ಲಾ ಅಂದುಕೊಂಡಂತೆ ಆಗಿ. ಪದ್ಮ ಶಿವಮೊಗ್ಗ ಸೇರಿಕೊಂಡಳು. ತಾಯಿ ಒಬ್ಬಂಟಿಎಂಬ ಕೊರಗಿದ್ದರೂ, ಹೊಸಜೀವನ ಆಹ್ಲಾದಕರವೆಂದೆನಿಸಿತು.

ಮದುವೆಯಾಗಿ ಮೂರು ವರ್ಷವೇನೋ. ಜ್ವರಕ್ಕೆ ನಲುಗಿ, ಕೆಮ್ಮಿ ಹೈರಾಣಾಗಿದ್ದ ಗಂಡನ ಕರೆದು McGann ಆಸ್ಪತ್ರೆಗೆ ಬಂದಳು ಪದ್ಮ. ರಕ್ತ, ಮೂತ್ರ,ಕಫ ಪರೀಕ್ಷೆಗಳೆಲ್ಲ ನಡೆದವು. 'ನಿಂತ ನೆಲ ಕುಸಿಯಿತೆಂಬ' ಮಾತು ನಿಜವಾದಂತೆ ಅನಿಸಿತು ಈಕೆಗೆ. HIV ಬಗ್ಗೆ high -school ನಲ್ಲಿ ಕೇಳಿದ್ದಳು, ತನ್ನ ಗಂಡನಿಗೆ ಈ ಮಾರಿ ಬರುವ ಎಳ್ಳಷ್ಟೂ ನಿರೀಕ್ಷೆಯೂ ಮಾಡಿರಲಿಲ್ಲ....... 
ತನ್ನ ಗಂಡನಿಗೆ ಈ ಮಾರಿ ಅಂಟಿದೆ, ಅಂದರೆ ತನಗೆ? ; ಕಿವಿಯಲ್ಲಿ ಜೇನು ನೊಣಗಳ ಹಿಂಡೊಂದು ಗುಯ್ಯ್ ಗುಟ್ಟಿದಂತೆ, ಕಂಗಳು ಯಾವ ವರ್ಣಗಳನ್ನೂ ಗುರುತಿಸಲಾರದಂತೆ, ದೇಹದಲ್ಲಿನ ಜೀವರಸಗಳೆಲ್ಲಾ ಹಿಮ್ಮುಖ ಚಲಿಸಿ ಬಾಯಿ ಒಣಗಿ ಮರುಭೂಮಿಯಾದಂತೆ ಭಾಸವಾಯ್ತು. 
ಇದೆಲ್ಲ ಸಂಭವಿಸಿದ್ದಾದರೂ ಎಂತು? ತನ್ನ ಗಂಡನ ಬಗ್ಗೆ ಸರ್ವವನ್ನೂ ತಿಳಿದಿದ್ದೇನೆಂಬುದು ಭ್ರಮೆಯೇ? ಶೇವಿಂಗ್ ಬ್ಲೇಡ್ ಇಂದೆಲ್ಲ ಬರುತ್ತದಂತಲ್ಲ ಹಾಗೇನಾದರು? ಇಂಜೆಕ್ಷನ್ ಸೂಜಿ? ಅಥವಾ ಯಾರ ಸಹವಾಸ?. ತಲೆಯ ನರಗಳೆಲ್ಲಾ ಉಬ್ಬಿ ಪಟಾರನೆ ಸಿಡಿದೇ ಹೋಗುವುದೇನೋ ಎಂಬಷ್ಟು ಯೋಚಿಸಿದಳು ಪದ್ಮ.
ಆಸ್ಪತ್ರೆಯ ರಿವಾಜುಗಳನ್ನೆಲ್ಲ ಪೂರೈಸಿ, ಗಂಡನೊಟ್ಟಿಗೆ ಆಟೋ ಹಿಡಿದು ಮನೆದಾರಿ ಹಿಡಿದಳು. ಮನೆಗೆ ಬಂದದ್ದೇ,
"ಹೇಗ್ರಿ ಇದು? ಹೇಗೆ ಸಾಧ್ಯ?" ತಡೆಯಲಸಾಧ್ಯ ಕಣ್ಣೀರಿನ ನಡುವೆಯೇ ಗಂಡನಿಗೆ ಕೇಳಿದಳು.
ಲೋಕೇಶ ಕೆಮ್ಮಿದನೆ ಹೊರತು ಉತ್ತರಿಸಲಿಲ್ಲ.
"ನನಗೂ ಬಂದಿದೆ.... ನಿಮ್ಮಿಂದ...."
ಲೋಕೇಶ ಬಟ್ಟೆ ಬದಲಿಸಿ, ಕುರ್ಚಿಯ ಮೇಲೆ ಕುಳಿತ.
"ಮಾತಾಡ್ರಿ, ಹೇಗಾಯ್ತು ಇದೆಲ್ಲ. ಯಾರ ಸಹವಾಸ ಮಾಡಿದ್ರಿ..?"
ಲೋಕೇಶ ತಲೆಯೆತ್ತಿ ಪದ್ಮಳನ್ನ ನೋಡಿದವ, ಮರುಕ್ಷಣ ತಲೆ ತಗ್ಗಿಸಿ ಕುಳಿತ.
"ಮದುವೆಗೆ ಮುಂಚೆಯದ್ದೇ ಇದು, ನಿಮ್ಮನ್ನ ನಂಬಿ... ನಂಬಿ ಮದುವೆಯಾದೆ"
"ಹೂ.." ಎಂದನಷ್ಟೆ ಗಂಡ.
"ಹುಚ್ಚು ಹಿಡಿಯುತ್ತೆ ನನಗಷ್ಟೇ, ಮಾತಾಡಿ ಇವಾಗ. ಅದೇನು ಮಾಡಿದ್ರಿ, ಇನ್ಯಾರಿಗೆಲ್ಲ ಹರಡಿದ್ದೀರಾ?"
"ತಪ್ಪು ಮಾಡಿದ್ದೇನೆ..." 
"ತಪ್ಪು? ಇದು ತಪ್ಪಾ? ಪಾಪ, ಮಹಾ ಪಾಪ..... ಮಾಡಿದ್ದೇನು ಹೇಳಿ?"
"ಹೌದು ಪಾಪ" ಎಂದೆನ್ನುತ್ತಾ ಮನೆಯಾಚೆ ನಡೆದ ಲೋಕೇಶ.

ಇದೆಲ್ಲಾ ಘಟಿಸಿ, ವರ್ಷವೆರಡು ಕಳೆವಷ್ಟರಲ್ಲಿ ಲೋಕೇಶ ಭುವಿ ತ್ಯಜಿಸಿದ. ತನ್ನೊಟ್ಟಿಗೇ HIV ಯ ಕಾರಣವನ್ನೂ ಭೂಗರ್ಭ ಸೇರಿಸಿದ. ಪದ್ಮ ಮರಳಿ ಚನ್ನಗಿರಿಯ ತಾಯಿಯ ಮನೆ ಸೇರಿಕೊಂಡಳು. ತಾಯಿಗಷ್ಟೇ HIV ಯ ವಿಷಯ ತಿಳಿಸಿದ್ದಳು.
"ನಾನೇ ನಿನ್ನ ನರಕಕ್ಕೆ ದೂಕಿದನೇ ಪದ್ಮ" ತಾಯಿ ಕಣ್ಣೊರೆಸುತ್ತ ಗೋಗರೆದಳು.
"ಹಣೆಬರಹ ಅಮ್ಮ, ಮತ್ತೆ ನಾವಿಬ್ಬರೇ ನೋಡು.. ಹಾ ಹಾ " ಹುಸಿನಗೆ ಬೀರಿ ತಾಯಿಯನ್ನ ಸಂತೈಸುವ ಯತ್ನ ಮಾಡಿದಳು.
"ಚೆನ್ನ ಹೇಳಿದ , ಹುಡುಗಿ ಚಿಕ್ಕವಳು ಯಾಕೆ ಮದ್ವೆ ಮಾಡ್ತಿಯಾ ಅಕ್ಕಾ ಅಂತ. ನಾನೇ ಮುಂದುವರೆದೇ ನೋಡು"
"ಮಾಮನ ಮಾತೇನು ಕೇಳ್ತಿಯಾ. ಅವಂದು ಇದ್ದದ್ದೇ. ನಾನೂ ಒಪ್ಪಿದೆ ತಾನೇ? ನಿನ್ನದೇನೂ ತಪ್ಪಿಲ್ಲ"
"ಏನೋ ಬಿಡು, ನೀನು ಚನಾಗಿರಲಿ ಅಂತಂದು...... ಹಾಂ ಚೆನ್ನನ ಮನೆಗೆ ಒಂದಷ್ಟು ದಿನ ಹೋಗ್ಬರ್ತೀಯೇನು? ನಿನಗೂ ಜೀವ ಸಡಿಲ ಆಗತ್ತೆ"
"ಎಂತದೂ ಬೇಡ. ನಾನೆಲ್ಲೂ ಹೋಗಲ್ಲ. ಇಲ್ಲೇ ಏನಾದ್ರು ಕೆಲಸ ಹುಡುಕಿ ಮಾಡ್ಕೊಂಡಿರ್ತೀನಿ"
"ಅಲ್ವೇ, ಸಣ್ಣವಳಿದ್ದಾಗ ಹೋಗಿದ್ದೇ ಆಯಿತು. ಎಷ್ಟು ವರ್ಷ ಆಯ್ತ್ ಹೇಳು ಅವನ ಮನೆಗೆ ನಾವಿಬ್ಬರೂ ಹೋಗಿ? ಅವನೇ ಎಲ್ಲಾ ನೋಡಿಕೊಳ್ತಾನೆ, ಅದಕ್ಕಾದರೂ...."
"ನಿಂಗೆ ಹೋಗಬೇಕಿದ್ರೆ ಹೋಗಮ್ಮ, ಹೇಳಿದೆನಲ್ಲ ನಾನ್ ಮಾಮನ ಮನೆಗೆ ಬರೋಲ್ಲ"
ಪದ್ಮ ಯೋಚಿಸಿದಳು, HIV ವಿಷಯವನ್ನೇ ವಿದ್ಯಾವಂಚಿತ ತಾಯಿಗೆ ತಿಳಿಹೇಳಿದ್ದೇನೆ. ಆದರೆ ಈ ವಿಷಯ ಹೇಳಲಾಗದಲ್ಲ. ಹೇಳಿದರೆ ನನ್ನ ನಂಬದೆ ಇರುತ್ತಾಳ? ನಂಬಲಿ-ಬಿಡಲಿ ಸತ್ಯವಲ್ಲವಾ? ಹೇಳಿಬಿಡೋಣವ? ಏನಂದುಕೊಳ್ತಾಳೋ.... ಇದ್ದೊಬ್ಬ ಅಳಿಯ ಪಾಪಿ ,ನಾಲಾಯಕ್ ಆದ.... ಈಗ ತಮ್ಮನೂ ಅಂದುಕೊಳ್ತಾಳೋ? ಅವನ ಮನೆ ಈಕೆಗೆ ತವರು ಮನೆಯಲ್ಲವಾ... ನಾನು ಕಷ್ಟಕ್ಕೆ ನನ್ನ ತವರಿಗೇ ಬಂದಿದ್ದೇನೆ... ನನಗೇನಾದರೂ ಆದರೆ ಇವಳೆಲ್ಲಿ ಹೋಗ್ತಾಳೆ ಪಾಪ. ಸಾಕು, ಈಕೆಗೆ ಕೊಟ್ಟ ಕಷ್ಟಗಳೇ ಸಾಕು. ಮಾಮ ಸಿಕ್ಕಾಗ ಅವನೊಟ್ಟಿಗೆ ಮಾತಾಡ್ತೇನೆ, ಅಷ್ಟಕ್ಕೋ ನಾನೀಗ ಗಂಡ ಇಲ್ಲದವಳು, ಅವನಿಗೂ ವಯಸ್ಸಾಯ್ತಲ್ಲ...... ನೋಡೋಣ. ಆದರೂ ಒಮ್ಮೆ ಡಾಕ್ಟರ್ ಹತ್ತಿರ ಹೇಳಿದರೆ ಒಳಿತೇನೋ......

ಇಷ್ಟೆಲ್ಲಾ ಸಂಕಟಗಳು ಒಬ್ಬಾಕೆಗೆ ಬರುವುದೆಂದರೆ ಅಸಹಜವೆ ಸರಿ ಎನಿಸಿತು ನವ್ಯಳಿಗೆ. ಸ್ವಲ್ಪವೂ ನೋವು ಕೊಡದ ತಂದೆ, ಸಾಕೆನ್ನುವಷ್ಟು ಪ್ರೀತಿ ಎರೆವ ತಾಯಿ. ತಾನೆಷ್ಟು ಭಾಗ್ಯವಂತಳು ಎಂದೆನಿಸಿತು. ಎರ್ಡುಮೂರು visit ನಲ್ಲಿಯೇ ಆಪ್ತಳಾದ ಪದ್ಮಳಿಗೆ ಏನೆಂದು ಸಲಹೆ ಕೊಡುವುದೆಂದು ಯೋಚಿಸಿದಳು.
"ನೀ ಹೇಳಿದ ಹಾಗೆ, ಅವರಿಗೂ ಈಗ ಪ್ರಾಯ ಅಲ್ಲ. ಆದರೂ ನಿನ್ನ ಜೋಪಾನ ನೀನು ಮಾಡು, ಹಾಗೇನಾದರೂ ಅನುಚಿತವಾಗಿ ವರ್ತಿಸಿದರೆ ಕಂಪ್ಲೇಂಟ್ ಕೊಡುವಿಯಂತೆ. Atleast ಕಂಪ್ಲೇಂಟ್ ಕೊಡ್ತೇನೆ ಅಂತಾದ್ರೂ ಹೆದರಿಸು"
"ಹಾಗೇ ಮಾಡ್ತೇನೆ ಮೇಡಂ. ಆದರೆ ಅದೇನೋ ಅವರನ್ನ ಕಂಡರೆ ಭಯ. ಸಣ್ಣವಳಿದ್ದಾಗಿಂದಲೂ ಭಯ"
"I can understand . ಹೆದರಿದರೆ ಅಲ್ವೇ ಹೆದರಿಸೋದು? ಧೈರ್ಯದಿಂದಿರು. ಅಷ್ಟಕ್ಕೂ ನಿನಗೆ ಕಷ್ಟವಾದರೆ ನಿನ್ನ ತಾಯಿಯನ್ನ ನನ್ನ ಹತ್ತಿರ ಕರೆದುಕೊಂಡು ಬಾ.... ನಾನೇ ಹೇಳ್ತೇನೆ. ಆಗದೇ?"
"ಆಗ್ತದೆ ಮೇಡಂ. ಒಮ್ಮೆ ನಾನೇ ಮಾತಾಡಿ ನೋಡ್ತೇನೆ. ನನ್ನ ಸಹಾಯಕ್ಕೆ ನೀವಿದ್ದೀರಲ್ಲ, ಅದೇ ಧೈರ್ಯ"
ಮತ್ತೇನೂ ಹೇಳ ತೋಚದೆ ನವ್ಯ ಮೌನದಿಂದ ಪದ್ಮಳೆಡೆ ಮಂದಹಾಸ ಬೀರಿದಳು. 

"ಕುಮಾರಣ್ಣನ ತೋಟದ್ದು, ಮೂರು ಹಲಸಿನ ಕಾಯಿ ಕೊಟ್ಟ. ಕೆಂಪಾದು ತೊಳೆ ಅಂತೇ" ಚೆನ್ನ ಮನೆಯ ಹಿಂದುಗಡೆ ಹಲಸಿನ ಕಾಯಿಯನ್ನ ಇಟ್ಟು, ಕೈ ತೊಳೆದು ಒಳ ಬಂದ.
"ಟೀ ಕುಡಿತೀರಾ ಮಾಮ?" ಕೇಳಿದಳು ಪದ್ಮ.
"ಒಂದಿಷ್ಟು ಮಾಡು, ಫೋನ್ ಮಾಡಿದ್ದೆ .... ಮಾತಾಡ್ಬೇಕು ಅಂದೇ..... ಫೋನ್ ಮಾಡೋದೇ ಇಲ್ವಲ್ಲ ನೀನು ......ವರ್ಷಗಳೇ ಆದ್ವೇನೋ.."
"ಹೂ, ಮಾತಾಡೋದಿತ್ತು. ಟೀ ಮಾಡ್ಬಿಡ್ತೀನಿ"
"ಮಾಡು ಅದಕ್ಕೇನಿಲ್ಲ. ಅಮ್ಮನೂ ಇಲ್ಲ.... ಇನ್ನೂ ಎರಡು ದಿನ ಬಿಟ್ಟು ಬರ್ತೀನೋ ಅಂದಿದ್ಲು. ಬಂದ್ಲಾ ಹೆಂಗೆ?"
"ಇಲ್ಲಾ, ನಾಳೆ ರಾತ್ರಿಗೆ ಇಲ್ಲಾಂದ್ರೆ ಬೆಳಗ್ಗೆ ಬರ್ತೀನಿ ಅಂದಿದಾಳೆ" 
"ಹೊ... ಹಂಗೆ..."
ಆರೇಳು ವರ್ಷದ ಹಿಂದೆ ಕೇಳಿಸಿದ ವರಸೆಯೇ ಮಾಮನ ಮಾತಿನಲ್ಲಿದೆ. ನಾಯಿ ಬಾಲ ಡೊಂಕೇ ಅಲ್ಲವೇ ........
ಮಾತನ್ನ ಆರಂಭಿಸುವುದಾದರೂ ಹೇಗೆ, ನನಗೆ HIV ಇದೆ ಎಂದು ಬಿಡಲಾ. ಇನ್ಮುಂದೆ ನಮ್ಮ ಭೇಟಿಯಾಗುತ್ತಲೇ ಇರುತ್ತದೆ ...ಹಿಂದೆ ನಡೆದ್ದದ್ದು, ಇನ್ಮುಂದೆ ನಡೆಯಬಾರದು ಎನ್ನಲಾ? ಏನೋ ಒಂದು ಹೇಳಲೇ ಬೇಕಲ್ಲ..... 
"ಮಾಮ, ನನ್ನ ಗಂಡ ತೀರಿಹೋದದ್ದು ಗೊತ್ತಿದೆ ಅಲ್ಲ.... ಅವರಿಗೆ ಮದುವೆಯಾದಾಗಿನಿಂದ ಹುಷಾರಿಲ್ಲ...."
"ಹೌದಾwದು ನನಗೆಲ್ಲಾ ತಿಳೀತು, ರೋಗಿಷ್ಟನ್ನ ಗಂಟು ಹಾಕಿದರು ನಿಮ್ಮ ಅತ್ತೆ. ಅವರಿಗೆ ಗೊತ್ತಿತ್ತು, ಅಂದರೂ ನಿನ್ನ ಜೀವನ ಹಾಳುಮಾಡಿದರು ನೋಡು" ಎಂದೆನ್ನುತ್ತಾ ಪದ್ಮಳ ಭುಜ ನೇವರಿಸಿದ ಚೆನ್ನ.
ಮೈ ಗೆ ಚಳಿ ಸೋಂಕಿದಂತಾಗಿ, ಪದ್ಮ ಕೊಡವಿ ಏಳಲು. ಹಿಂದಿನ ಅಭ್ಯಾಸದಿಂದೆಂಬಂತೆ ಪದ್ಮಳ ಬಿಗಿದಪ್ಪಿಕೊಂಡ ಚೆನ್ನ. ಶೇಖರಿಸಿಟ್ಟುಕೊಂಡ ಧೈರ್ಯವೆಲ್ಲಾ ಉಡುಗಿದಂತೆ ಭಾಸವಾಗಿ, ಭಯದ ಛಾಯೆ ಪದ್ಮಳ ಆವರಿಸಿತು. ಬಲು ಪ್ರಯಾಸದಿಂದ ಚೆನ್ನನ ತೋಳನ್ನ ಸರಿಸಲೆತ್ನಿಸಿದಳು.
"ನನಗೆಲ್ಲಾ ಗೊತ್ತಿದೆಯೇ, ಆ ಲೋಕೇಶ ನಿನಗೇನೂ ಚನ್ನಾಗಿ ನೋಡಿಕೊಂಡಿಲ್ಲ....."
"ಅವರೇನೋ ಚೆನ್ನಾಗೆ......"
"ಬಾಯ್ಮುಚ್ಚು... ಹಾಂ ಷ್ಹ್ಹ್...." ಈ ಮಾತನ್ನ ಪದ್ಮ ಎಷ್ಟು ಸಾರಿ ಕೇಳಿಲ್ಲ? ಷ್ಹ್ಹ್... ಎಂಬ ಸದ್ದು ಮಾರ್ದನಿಸಿ ಕಿವಿ-ಕಪಾಲವನ್ನೆಲ್ಲ ಆವರಿಸಿ ದಿಗ್ಬ್ರಮೆ ಮೂಡಿಸಿಲ್ಲ. ಆಯಸ್ಕಾನ್ತೀಯ ಶಕ್ತಿಯೊಂದು ಹಿಡಿದಿಟ್ಟು, ಬಿಡಿಸಲೆತ್ನಿಸಿದಷ್ಟು ಬರಸೆಳೆವಂತೆ...... ಅದೆಷ್ಟೋ ವರ್ಷಗಳ ನಿರಂತರ ಯಾತನೆ..... ಯಾತನೆಯೊಂದು ಪರಮ ಯಾತನೆಯೊಂದಿಗೆ ಮುಗಿವಂತೆ...... ಅನ್ಯಾಯಕ್ಕೆ ಘೋರನ್ಯಾಯವೇ ಉತ್ತರವಾದಂತೆ..... ನೆರೆ ತಂದ ರಾಡಿಯನ್ನ ಮಹಾನೆರೆ ಕೊಚ್ಚಿಹೊಯ್ದಂತೆ....
ಚೆನ್ನ ತನ್ನ ಆವರಿಸಿರೆ... ಪದ್ಮ ನಕ್ಕಳು..... ಸೋತಲ್ಲೂ ಗೆಲುವಿನ ಕೇಕೆಯಂತೆ ........ಯುದ್ದೋನ್ಮಾದದಿಂದೆಂಬಂತೆ ಜೋರಾಗಿ,......... ಗಹಗಹಿಸಿ ನಕ್ಕಳು.
1
Reading under T&C